ಸನ್ನಿ ಲಿಯೋನ್‌ಗೆ ಸಿಐಡಿ ನೋಟಿಸ್

ಬೆಳಗಾವಿಯ ಬಹುಕೋಟಿ ರೂಪಾಯಿ ‘ಶಿವಂ ಅಸೋಸಿಯೇಟ್ಸ್’ ಹೂಡಿಕೆ ವಂಚನೆ ಪ್ರಕರಣದಲ್ಲಿ  ಸಿಐಡಿ,  ಬಾಲಿವುಡ್ ನಟಿ ಸನ್ನಿ ಲಿಯೋನ್‌ ಸೇರಿದಂತೆ ಹಣ ಪಡೆದಿರುವ ನಟ-ನಟಿಯರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿದ್ದ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧದ ತನಿಖೆಯಲ್ಲಿ ಹಲವು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಸಿಐಡಿ ಡಿಐಜಿ ಭೀಮಾಶಂಕರ ಗುಳೇದ ನೀಡಿರುವ ಮಾಹಿತಿಯಂತೆ ಆರೋಪಿ ಶಿವಾನಂದ ನೀಲಣ್ಣವರ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಸಿನಿಮಾ ಕ್ಷೇತ್ರದ ಗಣ್ಯರಿಗೆ ಪಾವತಿಸಿರುವ ಹಿನ್ನೆಲೆಯಲ್ಲಿ   ನಟ-ನಟಿಯರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ತನಿಖೆಯಲ್ಲಿ ಒಟ್ಟು 40,700 ಹೂಡಿಕೆದಾರರಿಂದ ಸುಮಾರು 2,400 ಕೋಟಿ ರೂ. ಸಂಗ್ರಹಿಸಿರುವುದು ಬಹಿರಂಗವಾಗಿದೆ. 10 ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಸಂಗ್ರಹಿಸಿದ ಹಣದಲ್ಲಿ 540 ಕೋಟಿ ರೂಪಾಯಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಸುಮಾರು 170 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಐಡಿ ತಿಳಿಸಿದೆ.

ಹಣಕಾಸು ಜಾಲ ನಿರ್ವಹಣೆಗೆ ಆರೋಪಿ ಸುಮಾರು 30 ಬ್ಯಾಂಕ್ ಖಾತೆಗಳನ್ನು ಬಳಸಿದ್ದಾನೆ. ಒಂದು ಖಾತೆಯಲ್ಲೇ 36,200 ಪುಟಗಳಷ್ಟು ಹಣಕಾಸು ವ್ಯವಹಾರ ದಾಖಲೆಗಳು ಪತ್ತೆಯಾಗಿವೆ. ಹೊಸ ಹೂಡಿಕೆದಾರರಿಂದ ಬಂದ ಹಣವನ್ನು ಹಳೆಯ ಹೂಡಿಕೆದಾರರಿಗೆ ಬಡ್ಡಿ ಮತ್ತು ಲಾಭಾಂಶ ರೂಪದಲ್ಲಿ ಪಾವತಿಸುವ ಪಾಂಜಿ ಮಾದರಿಯ ವಂಚನೆ ನಡೆಸಲಾಗುತ್ತಿತ್ತು.  ಆರೋಪಿಯ ಬಂಧನದ ನಂತರದ  20 ದಿನಗಳಲ್ಲೇ ಸಾರ್ವಜನಿಕರು 5 ಕೋಟಿಗೂ ಹೆಚ್ಚು ಹಣವನ್ನು ಮತ್ತೆ ಕಂಪನಿಯ ಖಾತೆಗೆ ಜಮಾ ಮಾಡಿದ್ದಾರೆ ಎಂದು ಸಿಐಡಿ ತನಿಖೆಯಲ್ಲಿ ದೃಢವಾಗಿದೆ.

ಆರಂಭಿಕ ಹಂತದಲ್ಲಿ ಅಕ್ರಮ ಲಾಭ ಪಡೆದ ಹಳೆಯ ಹೂಡಿಕೆದಾರರಿಗೆನೋಟಿಸ್ ನೀಡಿ ಅವರಿಂದ  400 ಕೋಟಿ ರೂಪಾಯಿ ವಸೂಲಿ ಮಾಡಿ ಸಂತ್ರಸ್ತರಿಗೆ ಹಿಂತಿರುಗಿಸುವ ಕಾರ್ಯಾಚರಣೆ ಆರಂಭವಾಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!