Shakhahaari Review : ಒಂದು ‘ಶಾಖ’ದ ಕಥೆ!

ಚಿತ್ರ: ಶಾಖಾಹಾರಿ

ನಿರ್ದೇಶನ: ಸಂದೀಪ್ ಸುಂಕದ್
ನಿರ್ಮಾಪಕರು: ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ
ತಾರಾಗಣ: ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ವಿನಯ್, ನಿಧಿ ಹೆಗ್ಡೆ ಇತರರು

ರೇಟಿಂಗ್: 4/5

ಶಾಖ ದೈಹಿಕವಾಗಿ ಸುಡುವುದು ಮಾತ್ರವಲ್ಲ, ಅಂತರ್ಯವನ್ನು ಹೇಗೆ ಸುಡುತ್ತದೆ ಎನ್ನುವುದನ್ನು ಪರಿಣಾಮಕಾರಿಯಾಗಿ ಸಾದರಪಡಿಸಿರುವ ಚಿತ್ರ ಶಾಖಾಹಾರಿ.

ಈ ವಾರ ತೆರೆಗೆ ಬಂದಿರುವ ಈ ಚಿತ್ರ ಕ್ರೈಂ ಥ್ರಿಲ್ಲರ್ ವಿಷಯವನ್ನು ಹೊಂದಿರುವ ಜೊತೆಗೆ ಭಿನ್ನವಾದ ಚಿತ್ರಕಥೆಯ ಮೂಲಕ ಗಮನ ಸೆಳೆಯುತ್ತದೆ. ಹೋಟೆಲ್ ನಡೆಸುವ ಸುಬ್ಬಣ್ಣ ಪಾತ್ರಧಾರಿ ರಂಗಾಯಣ ರಘು, ಹೆಣವನ್ನು ಮಚ್ಚಿನಿಂದ ಕತ್ತರಿಸಿ ತನ್ನ ಹೋಟೆಲಿನ ಒಲೆಗೆ ಎಸೆಯುತ್ತಾನೆ. ಆ ಹೆಣ ಯಾರದ್ದು ಎನ್ನುವುದೇ ಚಿತ್ರದ ಕಥಾಹಂದರವಾಗಿದೆ.

ನಿರ್ದೇಶಕರು ಚಿತ್ರದಲ್ಲಿ ಶಾಖವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಕಥೆಯನ್ನು ಯಾವುದೇ ಸಿದ್ಧಸೂತ್ರಗಳಿಗೆ ಒಳಪಡಿಸದೆ ಮುಕ್ತವಾಗಿ ಹೇಳುತ್ತಾ ಹೋಗಿದ್ದಾರೆ. ಚಿತ್ರದಲ್ಲಿ ಮಲೆನಾಡಿನ ಭಾಷೆ ಇದೆ. ರಂಗಾಯಣ ರಘು ಹಾಗೂ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಪಾತ್ರಧಾರಿ ಗೋಪಾಲಕೃಷ್ಣ ದೇಶಪಾಂಡೆ ಅವರನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.

ರಂಗಾಯಣ ರಘು ಅವರು ಅಮೋಘವಾಗಿ ಅಭಿನಯಿಸಿದ್ದಾರೆ. ಸಂಶಯ, ಜೀವನ ಪ್ರೀತಿ, ಮುಗ್ದತೆ, ಕ್ರೂರತೆಯನ್ನು ತಮ್ಮ ಪಾತ್ರದ ಮೂಲಕ ರಂಗಾಯಣ ರಘು ಸಮರ್ಥವಾಗಿ ಹೊರಹಾಕಿದ್ದಾರೆ.

ರಘು ಅವರಿಗೆ ಸಮನಾಗಿ ಗೋಪಾಲಕೃಷ್ಣ ದೇಶಪಾಂಡೆ ಅಭಿನಯ ಮಾಡಿದ್ದಾರೆ. ವೈಯಕ್ತಿಕ ಜೀವನದ ಸಮಸ್ಯೆ, ವೃತ್ತಿ ಜೀವನದ ಕೇಸ್ ಬಗೆ ಹರಿಯದ ಹತಾಶೆಯನ್ನು ಅಭಿವ್ಯಕ್ತಿಗೊಳಿಸುವಲ್ಲಿ ಗೋಪಾಲಕೃಷ್ಣ ಗೆದ್ದಿದ್ದಾರೆ.

ಚಿತ್ರದಲ್ಲಿ ಸುಜಯ್ ಶಾಸ್ತ್ರಿ, ನಿಧಿ ಹೆಗ್ಡೆ, ಹರಿಣಿ, ಮಮತಾ ನಾಯಕ್ ಇತರರ ನಟನೆ ಚೆನ್ನಾಗಿದೆ. ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಹಣ ರೋಚಕ ಅನುಭವಕ್ಕೆ ಕಾರಣವಾಗುತ್ತದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!