PHOTO Movie Review : ಲಾಕ್ ಡೌನ್ ಕಥೆ ಹೇಳುವ ‘ ಪೋಟೋ ‘

ಚಿತ್ರ: ಪೋಟೋ

ನಿರ್ದೇಶನ: ಉತ್ಸವ್ ಗೋನಾವರ
ನಿರ್ಮಾಣ: ಮಸಾರಿ ಟಾಕೀಸ್
ತಾರಾಗಣ: ಮಹಾದೇವ ಹಡಪದ, ವೀರೇಶ್ ಗೋನಾವರ, ಸಂಧ್ಯಾ ಅರಕೆರೆ, ಜಹಾಂಗೀರ್ ಇತರರು..
ರೇಟಿಂಗ್: 4/5

ಸರಕಾರ ಲಾಕ್ ಡೌನ್ ಹೇರಿದ ಕಾರಣ ಸಾಮಾನ್ಯ ಜನರು ಪಟ್ಟ ಸಂಕಷ್ಟದ ಕಥೆಯನ್ನು ವಿವರಿಸುವ ಚಿತ್ರ ಪೋಟೋ.

ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಪೋಟೋ ಚಿತ್ರ ಈ ವಾರ ತೆರೆಗೆ ಬಂದಿದೆ. ಮೊದಲ ಬಾರಿಗೆ ಲಾಕ್ ಡೌನ್ ಹೇರಿದಾಗ ತಮ್ಮ ಊರುಗಳಿಗೆ ಮರಳಲು ಕಾರ್ಮಿಕರು ಸಾಕಷ್ಟು ಕಷ್ಟ ಪಟ್ಟರು. ಕೆಲವರು ರಸ್ತೆಯಲ್ಲಿ ಪ್ರಾಣಬಿಟ್ಟರು. ಈ ಎಲ್ಲ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಪೋಟೋ ಚಿತ್ರ ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.

ಕೂಲಿ ಕಾರ್ಮಿಕ ತಂದೆಯ ಜೊತೆಗೆ ಉತ್ತರ ಕರ್ನಾಟಕದ ಮುಗ್ಧ ಬಾಲಕನೊಬ್ಬ ಬೆಂಗಳೂರಿಗೆ ಬರುತ್ತಾನೆ. ವಿಧಾನಸೌಧ ಹಾಗೂ ದರ್ಶನ್ ಜೊತೆಗೆ ಫೋಟೋ ತೆಗೆಸಿಕೊಳ್ಳಬೇಕು ಎನ್ನುವುದು ಆತನ ಕನಸಾಗಿರುತ್ತದೆ. ಆ ಬಾಲಕ ವಿಧಾನಸೌಧ ನೋಡಲು ಹೋಗಬೇಕು ಎನ್ನುವ ವೇಳೆಗೆ ಲಾಕ್ ಡೌನ್ ಜಾರಿಯಾಗುತ್ತದೆ. ಊರಿಗೆ ವಾಪಸ್ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದರೆ ಯಾವುದೇ ವಾಹನದ ವ್ಯವಸ್ಥೆ ಇಲ್ಲದ ಕಾರಣ ಅವರು ಊರಿಗೆ ನಡೆದುಕೊಂಡು ಹೋಗುತ್ತಾರೆ. ಹಣ, ಊಟ ಇಲ್ಲದೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಎದುರಾಗುವ ಕಷ್ಟದ ಸನ್ನಿವೇಶಗಳನ್ನು ಈ ಚಿತ್ರ ತೆರೆದಿಡುತ್ತದೆ.

ನಿರ್ದೇಶಕರು ಚಿತ್ರವನ್ನು ಸಂಪೂರ್ಣವಾಗಿ ಭಿನ್ನ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಬಡವರ ಬದುಕು ಎಷ್ಟು ಸಂಕಟ ಪಟ್ಟಿತು ಎನ್ನುವುದನ್ನು ತೋರಿಸುವ ಯತ್ನವನ್ನು ಮಾಡಿದ್ದಾರೆ.

ರಂಗಭೂಮಿ ಕಲಾವಿದ ಮಹಾದೇವ ಹಡಪದ ಅವರು ಕೂಲಿಕಾರ್ಮಿಕನ ಪಾತ್ರದಲ್ಲಿ ನಟಿಸಿದ್ದಾರೆ. ಮಗನ ಪಾತ್ರದಲ್ಲಿ ವೀರೇಶ್ ಗೋನಾವರ ಮುಗ್ಧವಾಗಿ ನಟಿಸಿದ್ದಾರೆ. ಇವರಿಬ್ಬರು ಪ್ರೇಕ್ಷಕರ ಹೃದಯಕ್ಕೆ ನಾಟುವಂತೆ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಸಂಧ್ಯಾ ಅರಕೆರೆ ಹಾಗೂ ಜಹಾಂಗೀರ್ ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ. ವ್ಯವಸ್ಥೆಯ ವಿರುದ್ಧ ಸಿಡಿದೇಳದ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಈ ಚಿತ್ರ ಮೂಡಿ ಬಂದಿದೆ.

ಚಿತ್ರದಲ್ಲಿ ಯಾವುದೇ ಅಬ್ಬರದ ಸಂಭಾಷಣೆಯನ್ನು ಬಳಸಿಕೊಂಡಿಲ್ಲ. ನಿರ್ದೇಶಕರು ಮೊನಚಾಗಿ ದೃಶ್ಯಗಳ ಮೂಲಕ ಕಥೆಯನ್ನು ಹೇಳಿದ್ದಾರೆ. ಛಾಯಾಗ್ರಾಹಕ ದಿವಾಕರನ್ ಅವರು ಸಿನಿಮಾದ ಪ್ರತಿ ದೃಶ್ಯ ಪ್ರೇಕ್ಷಕರಿಗೆ ತಟ್ಟುವಂತೆ ಮಾಡಿದ್ದಾರೆ.
______

Be the first to comment

Leave a Reply

Your email address will not be published. Required fields are marked *

Translate »
error: Content is protected !!