ರೇಣುಕಾಸ್ವಾಮಿ ಕೊಲೆ: ಸಾಕ್ಷಿಗೆ ಬೆದರಿಕೆ ಹಿಂದೆ ಪ್ರಭಾವಿಗಳು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪ್ರಭಾವಿಗಳ ಪಾತ್ರ ಇರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಡಿ ಪುನೀತ್, ಸುಹಾಸ್ ಹಾಗೂ ವೇಣು ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಬಂಧನಕ್ಕೂ ಮುನ್ನ ಆರೋಪಿಗಳು ಕರೆ ದಾಖಲೆಗಳು, ವಾಟ್ಸಪ್ ಚಾಟ್ ಸೇರಿದಂತೆ ಹಲವು ಮಾಹಿತಿಗಳನ್ನು ಅಳಿಸಿದ್ದರು ಎನ್ನಲಾಗಿದೆ. ಫಾರೆನ್ಸಿಕ್ ತಜ್ಞರು ಅವುಗಳನ್ನು ಮರುಪಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಾಕ್ಷಿಗೆ ಬೆದರಿಕೆ ಹಾಕಿದ ವೇಳೆ ಕಾನ್ಫರೆನ್ಸ್ ಕರೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆ ಕರೆಯಲ್ಲಿ ಬಂಧಿತ ಆರೋಪಿಗಳ ಹೊರತಾಗಿ ಬೇರೆ ಯಾರೆಲ್ಲ ಭಾಗಿಯಾಗಿದ್ದರು ಎಂದು ಫಾರೆನ್ಸಿಕ್ ವರದಿಯಿಂದ ಬಹಿರಂಗವಾಗುವ ಸಾಧ್ಯತೆ ಇದೆ. ವಿಚಾರಣೆ ವೇಳೆ ಆರೋಪಿಗಳಿಂದ ಹೇಳಿಕೆ ಮತ್ತು ಮರು ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ಆದರೆ ಅವರು ತನಿಖೆಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ.

ಪ್ರಮುಖ ಆರೋಪಿ ಪುನೀತ್ ಪ್ರಕರಣದ ಸಾಕ್ಷಿಗಳ ಹೇಳಿಕೆಯನ್ನು ಬದಲಾಯಿಸುವ ಸಂಬಂಧ ‘ಡೀಲ್’ ಪಡೆದಿದ್ದಾನೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ಆತ ಪದೇ ಪದೇ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿರುವುದರಿಂದ ತನಿಖೆಗೆ ಅಡಚಣೆ ಉಂಟಾಗುತ್ತಿದೆ ಎಂದು ಹೇಳಲಾಗಿದೆ.

ಕೊಲೆ ಪ್ರಕರಣದ ಸಾಕ್ಷಿಯಾಗಿರುವ ದುರ್ಗಾ ಬಾರ್‌ನ ಸಂದೀಪ್ ಅವರಿಗೆ ಆಕರ್ಷ್ ಎಂಬಾತನ ಮೂಲಕ ಕರೆ ಮಾಡಿಸಿ ನ್ಯಾಯಾಲಯದಲ್ಲಿ ನಿರ್ದಿಷ್ಟ ರೀತಿಯ ಹೇಳಿಕೆ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಂದೀಪ್ ನ್ಯಾಯಾಲಯದ ಮುಂದೆ ತಮಗೆ ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂದು ಹೇಳಿಕೆ ನೀಡಿದ್ದರು. ಅದರಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!