‘ರಾಶಿ’ ಚಿತ್ರದ ಮೊದಲ ಹಾಡು ಬಿಡುಗಡೆ

ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ   ‘ರಾಶಿ’ ಚಿತ್ರದ ಮೊದಲ ಹಾಡು ‘ಮೊದಲ ಪ್ರೀತಿ’ ಬಿಡುಗಡೆಯಾಗಿದೆ.

ಚಿತ್ರದ ಮೊದಲ ಹಾಡು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಅವರ ಧ್ವನಿಯಲ್ಲಿ ಮೂಡಿಬಂದಿದೆ. ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್   ಹಾಡಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ.

ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಮೊದಲ ಪ್ರೀತಿ’ ಹಾಡಿನಲ್ಲಿ ಆದಿತ್ಯ ಶಶಿಕುಮಾರ್ ಅವರ ನೃತ್ಯ  ಗಮನ ಸೆಳೆಯುತ್ತಿದೆ. ತಂದೆ ಶಶಿಕುಮಾರ್ ಅವರಂತೆ ಉತ್ತಮ ನೃತ್ಯಪಟುವಾಗಿರುವ ಆದಿತ್ಯ  ಹಾಡಿನಲ್ಲಿ ಡ್ಯಾನ್ಸ್‌ ಮೂಲಕ ಗಮನ ಸೆಳೆದಿದ್ದಾರೆ. ಸಮೀಕ್ಷಾ ನಾಯಕಿಯಾಗಿ ನಟಿಸಿದ್ದಾರೆ.

ಡಿ ಬಿಟ್ಸ್ ಕಂಪನಿ ಮೂಲಕ ಬಿಡುಗಡೆಯಾಗಿರುವ ಹಾಡು ನಿರೀಕ್ಷೆಗೂ ಮೀರಿ  ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಗಳಿಸುತ್ತಿದೆ. ‘ರಾಶಿ’ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಐದು ಹಾಡುಗಳು ಚಿತ್ರದ ಭಾಗವಾಗಿರಲಿವೆ. ಮತ್ತೊಂದು ಹಾಡು ಪ್ರಚಾರಗೀತೆಯಾಗಿ ಇರಲಿದೆ.

ಕುನಾಲ್ ಗಾಂಜಾವಾಲ, ವಿಜಯ್ ಯೇಸುದಾಸ್, ಅನುರಾಧಾ ಭಟ್, ಶರಣ್, ಮಳವಳ್ಳಿ ಮಹಾದೇವಸ್ವಾಮಿ, ಸಿಟಿ ಲೈಟ್ಸ್ ಹಾಗೂ ‘ಭಾವ ಭಾವ’ ಖ್ಯಾತಿಯ ಅಂಕಿತ್ ಸೇರಿದಂತೆ ಹಲವು ಗಾಯಕರು  ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ. ನಿರ್ಮಿಸಿರುವ, ವಿಜಯ್ ಪಾಳೇಗಾರ್ ನಿರ್ದೇಶನದ ‘ರಾಶಿ’ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ.  ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಿರ್ಮಾಪಕ ಅಖಿಲೇಶ್ ಕಥೆ ಬರೆದಿದ್ದಾರೆ.  ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರವನ್ನು ಒಳಗೊಂಡಿರುವ ಚಿತ್ರಕ್ಕೆ ಚಿತ್ರಕಥೆ  ವಿಜಯ್ ಪಾಳೇಗಾರ್ ಬರೆದಿದ್ದಾರೆ.

ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮಹೇಶ್ ಸಾತನೂರು ಕಲಾ ನಿರ್ದೇಶನ ಚಿತ್ರಕ್ಕಿದೆ. ರಮೇಶ್ ಇಂದಿರಾ, ತಬಲ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ ಹಾಗೂ ಭಜರಂಗಿ ಪ್ರಸನ್ನ  ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!