ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಆಡಿಯೋ ಹಕ್ಕುಗಳು 75 ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದು, ಭಾರತೀಯ ಸಿನಿ ಇತಿಹಾಸದಲ್ಲೇ ಅತ್ಯಂತ ದುಬಾರಿ ಮ್ಯೂಸಿಕ್ ಡೀಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಗೀತ ಸಂಸ್ಥೆಯಾದ ಟಿ-ಸೀರೀಸ್ ಭಾರೀ ಮೊತ್ತ ನೀಡಿ ಚಿತ್ರದ ಮ್ಯೂಸಿಕ್ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಅಧಿಕೃತ ಘೋಷಣೆ ಬಾಕಿ ಇದ್ದರೂ ಈ ಡೀಲ್ ಸಿನಿಮಾ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಭಾರತೀಯ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟವಾದ ದಾಖಲೆ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದ ಹೆಸರಿನಲ್ಲಿತ್ತು. ಆ ಚಿತ್ರದ ಮ್ಯೂಸಿಕ್ ರೈಟ್ಸ್ ಸುಮಾರು 65 ಕೋಟಿಗೆ ಮಾರಾಟವಾಗಿದೆ. ‘ರಾಮಾಯಣ’ ಸಿನಿಮಾದ ಆಡಿಯೋ ಹಕ್ಕುಗಳು ಆ ದಾಖಲೆಯನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲು ನಿರ್ಮಿಸಿದೆ.
ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಚಿತ್ರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಜುಲೈ 30ರಂದು ‘ರಾಮಾಯಣ ಭಾಗ-1’ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಿ ಸದ್ದು ಮಾಡಿದೆ.
—–





Be the first to comment