ತಮ್ಮ ಪುತ್ರ ಆಯುಷ್ ನಟನೆಯ ಚಿತ್ರದಿಂದ ನಿರ್ದೇಶಕ ಪುರುಷೋತ್ತಮ್ ಅವರಿಂದ ಸಿನಿಮಾವನ್ನು ಉಳಿಸಿಕೊಳ್ಳುವ ಕಾರಣದಿಂದ ಕೈ ಬಿಡಲಾಗಿದೆ ಎಂದು ನಿರ್ಮಾಪಕಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
ನಿರ್ದೇಶಕರ ಆಪಾದನೆ ಬಿನ್ನಲ್ಲೇ ಪ್ರಿಯಾಂಕಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಿರ್ದೇಶಕರು ಮೊದಲಿಗೆ ಬರೀ ಕಥೆಯ ಎಳೆ ಇಟ್ಟುಕೊಂಡು ನಮ್ಮ ಬಳಿ ಬಂದಿದ್ದರು. ನಿರ್ಮಾಪಕರ ತಂಡ ಕತೆ ಚಿತ್ರಕತೆ ಬರೆಸಲು ಹಣ, ಸಮಯ ವ್ಯಯಿಸಿದೆ. ಚಿತ್ರೀಕರಣ ಮುನ್ನ ನಿರ್ದೇಶಕರ ಇಚ್ಚೆಯಂತೆ ಎರಡು ಬಾರಿ ಜಮ್ಮು ಕಾಶ್ಮೀರಕ್ಕೆ ಹೋಗಿ ಬರಲಾಯಿತು. ಸ್ಕ್ರಿಪ್ಟ್ ರೆಡಿ ಇರದಿದ್ದರೂ ನಿರ್ದೇಶಕರ ಮೇಲಿನ ನಂಬಿಕೆಯಿಂದ ಸಿನಿಮಾ ಶೂಟಿಂಗ್ ಶುರು ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
ಚಿತ್ರೀಕರಣ ಬಗ್ಗೆ ನಿರ್ದೇಶಕರಿಗಿಗೆ ಯೋಜನೆ ಇರಲಿಲ್ಲ. ಫಲಿತಾಂಶ ಅಂದುಕೊಂಡಂತೆ ಶೂಟಿಂಗ್ ಆಗಲಿಲ್ಲ. ಮೊದಲ ಹಂತದ 27 ದಿನಗಳ ಚಿತ್ರೀಕರಣದ ವಿಡಿಯೋವನ್ನು ನೋಡಿ ಬೇಸರವಾಯಿತು. ಫಲಿತಾಂಶ ಅಂದುಕೊಂಡಂತೆ ಇರಲಿಲ್ಲ ಎಂದಿದ್ದಾರೆ.
2 ನೇ ಹಂತದ ಚಿತ್ರೀಕರಣಕ್ಕೆ ನಿರ್ದೇಶಕರು ಸರಿಯಾಗಿ ಫೋನ್ ತೆಗೆಯುತ್ತಿರಲಿಲ್ಲ. ಅವರು ತಮ್ಮ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದರಿಂದ ಸಿನಿಮಾದ ಕೆಲಸಗಳಿಗೆ ಹೊಡೆತ ಬೀಳುತ್ತಿತ್ತು ಎಂದು ಆಪಾದನೆ ಮಾಡಿದ್ದಾರೆ.
ಸ್ವತಃ ನಿರ್ದೇಶಕರೇ ಛಾಯಾಗ್ರಾಹಕರನ್ನು ಬದಲಾಯಿಸಿ ಎಂದು ಕೇಳಿಕೊಂಡಿದ್ದರು. 80 ದಿನಗಳ ಹೆಚ್ಚುವರಿ ಚಿತ್ರೀಕರಣಕ್ಕೆ ಅವಕಾಶ ಕೇಳಿದ್ದರು. ಅವರ ಕೆಲಸದ ವೈಖರಿ ಸಿನಿಮಾದ ವೆಚ್ಚವನ್ನು ಜಾಸ್ತಿ ಮಾಡುವಂತಿದ್ದವು. ಅಲ್ಲದೇ ಅಂದುಕೊಂಡಂತೆ ಸಿನಿಮಾ ಬರುತ್ತಿರಲಿಲ್ಲ. ಅನಿವಾರ್ಯವಾಗಿ ನಿರ್ದೇಶಕರನ್ನು ತೆಗೆದು ಹಾಕಲೇಬೇಕಾಯಿತು ಎಂದು ಹೇಳಿದ್ದಾರೆ.
ಪುರುಷೋತ್ತಮ್ ಅವರು ತಮ್ಮನ್ನು ನಿರ್ಮಾಪಕರು ಹೇಳದೆ ಕೈಬಿಟ್ಟಿದ್ದಾರೆ ಎಂದು ಆಪಾದನೆ ಮಾಡಿದ ಬೆನ್ನಲ್ಲೇ ಪ್ರಿಯಾಂಕಾ ಉಪೇಂದ್ರ ಈಗ ಸ್ಪಷ್ಟನೆ ನೀಡಿದ್ದಾರೆ.





Be the first to comment