ಪ್ರೇಮಿ

Movie Review: ಅಮರ ಪ್ರೇಮಿಯ ಅಂತರಂಗದ ರಂಗು

ಚಿತ್ರ : ಪ್ರೇಮಿ
ನಿರ್ದೇಶನ : ಪ್ರದೀಪ್ ವರ್ಮ
ನಿರ್ಮಾಪಕ : ಸಿದ್ದಲಿಂಗಯ್ಯ ಬಿ
ತಾರಾಗಣ : ಅದ್ವಿಕ್, ಸಾತ್ವಿಕಾ, ಪ್ರದೀಪ್ ವರ್ಮ ಮೊದಲಾದವರು….
ರೇಟಿಂಗ್: 3.5/5

ಕುಜ‌ದೋಷ ಎನ್ನುವ ನಂಬಿಕೆ ಮತ್ತು ಪ್ರೀತಿ ಎನ್ನುವ ಸತ್ಯ ಇವುಗಳ ನಡುವೆ ಗೆಲವು ಯಾರಿಗೆ ಎನ್ನುವುದೇ ಪ್ರೇಮಿ ಚಿತ್ರದ ಸಾರ.

ಒಂದು ಸರಳ, ಸುಂದರ ಪ್ರೇಮಕಥೆಯನ್ನು ಸುತ್ತಿ ಬಳಸಿ ಹೇಳಿದ್ದಾರೆ ನಿರ್ದೇಶಕ ಪ್ರದೀಪ್ ವರ್ಮ. ಹಾಗಂತ ಇಲ್ಲಿನ‌ ದಾರಿ ನೀರಸವೇನಲ್ಲ. ಪ್ರತಿ ತಿರುವಿನಲ್ಲೂ ಕುತೂಹಲ ಭರಿತ ಕಥೆಗಳಿವೆ.

ಈಗಾಗಲೇ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿರುವ ಪ್ರದೀಪ್ ವರ್ಮ ನಿರ್ದೇಶಕರಾಗಿ ಮಾತ್ರವಲ್ಲ, ನಟರಾಗಿಯೂ ಮಿಂಚಿರುವ ಚಿತ್ರ ಇದು. ಸಾಮಾನ್ಯ ಸಿನಿಮೀಯ ಪ್ರೇಮಕಥೆಗಿಂತ ಹೊಸದಾದ ರೀತಿಯಲ್ಲಿ ಮೂಡಿಬಂದಿದೆ ಎನ್ನುವುದೇ ಈ ಚಿತ್ರದ ಹಿರಿಮೆ.

ಪ್ರೇಮ್ ನದ್ದು ಪ್ರೇಮಮಯಿ ವ್ಯಕ್ತಿತ್ವ. ಈ ಕಾರಣದಿಂದಲೇ ಟೀನಾಗೆ ಆತನೆಂದರೆ ಪ್ರಾಣ. ಆದರೆ ಅದು ಪ್ರೇಮ ಎಂದು ಅರಿವಾಗುತ್ತಲೇ ತನ್ನ ಫ್ಲ್ಯಾಶ್‌‌‌ ಬ್ಯಾಕ್ ಸ್ಟೋರಿ ಬಿಚ್ಚಿಡುತ್ತಾನೆ ಪ್ರೇಮ್. ಅದರ ಪ್ರಕಾರ ಪ್ರೇಮ್ ಅದಾಗಲೇ ವಿವಾಹಿತ. ಆದರೆ ಈ ವಿವಾಹ ನಡೆದಿರುವುದು ಬಾಲ್ಯದಲ್ಲಿ. ಆಗ ಆಕೆಗೆ ಕುಜದೋಷ ಇರುವ ಕಾರಣ ಪ್ರೇಮ್ ಕುಟುಂಬದಲ್ಲಿ ಒಂದು ದುರಂತ ಘಟನೆ ಸಂಭವಿಸಿರುತ್ತದೆ. ಅದರಿಂದ ಪಾರಾಗಲು ನಗರ ಸೇರಿಕೊಂಡ ಪ್ರೇಮ್ ಇದೀಗ ಮತ್ತೆ ತನ್ನ ಬಾಲ್ಯದ ಪತ್ನಿಯ ಜಾಡು ಹುಡುಕಿ ಹಳ್ಳಿ ಸೇರುತ್ತಾನೆ.‌ ಈ ಪ್ರಯಾಣದಲ್ಲಿ ಎದುರಾಗುವ ಸಮಸ್ಯೆಗಳೇನು? ಅವುಗಳಿಗೆ ಪ್ರೇಮ್ ಕಂಡುಕೊಳ್ಳುವ ಪರಿಹಾರಗಳೇನು? ಎನ್ನುವುದನ್ನು ಪರದೆಯ ಮೇಲೆ ಪರಮಾಪ್ತವಾಗಿ ಹೇಗೆ ಹೇಳಬಹುದು ಎನ್ನುವುದನ್ನು ಈ ಚಿತ್ರ ತೋರಿಸಿಕೊಟ್ಟಿದೆ.

ಒಂದು ಅಪಹರಣದ ಮೂಲಕ ಆರಂಭವಾಗುವ ಚಿತ್ರವು ಅಂತ್ಯದ ಹೊತ್ತಿಗೆ ಮನಸನ್ನೇ ಅಪಹರಿಸುವ ಮಟ್ಟಕ್ಕೆ ಬೆಳೆಯುತ್ತದೆ. ಅದಕ್ಕೆ ಕಾರಣ ಚಿತ್ರಕಥೆಯಲ್ಲಿ ಸ್ವಚ್ಛ ಪ್ರೇಮವನ್ನು ಪೋಣಿಸಿರುವ ರೀತಿ. ಹೊಸಬರು ಸೇರಿದಂತೆ ಪ್ರಮುಖ ಪಾತ್ರವರ್ಗಗಳಲ್ಲಿ ಕಾಣಿಸಿರುವ ಪ್ರತಿಯೊಬ್ಬ ಕಲಾವಿದರನ್ನೂ ಪಾತ್ರಕ್ಕೆ ಪ್ರಾಮಾಣಿಕವಾಗಿರುವಂತೆ ತೋರಿಸಲಾಗಿದೆ.

ಪ್ರೇಮ್ ಎನ್ನುವ ಪ್ರೇಮಮಯಿ ಯುವಕನಾಗಿ ಅದ್ವಿಕ್ ನಟನೆ ಮನಸೂರೆಗೊಳ್ಳುವಂತಿದೆ. ಈತನ ಮೇಲೆ ಪ್ರೀತಿಯಲ್ಲಿ ಬೀಳುವ ಟೀನಾಳಾಗಿ ಶೋಭಿತಾ ಶೋಭಿಸಿದ್ದಾರೆ. ಅದ್ವಿಕ್ ಜತೆ ಬಾಲ್ಯದಲ್ಲೇ ಪತ್ನಿಯಾಗಿ ಆನಂತರ ಅನಾಮಿಕಳಂತೆ ಬಾಳುವ ಮಧುವತಿ ಪಾತ್ರವನ್ನು ಸಾತ್ವಿಕಾ ನಿಭಾಯಿಸಿದ್ದಾರೆ. ನಟಿ ಶ್ರವ್ಯ ರಾವ್ ಅವರು ಸಾತ್ವಿಕಾ ಆಗಿ ಬದಲಾದ ಬಳಿಕ ಶುರು ಮಾಡಿರುವ ಈ ಸೆಕೆಂಡ್ ಇನ್ನಿಂಗ್ಸ್ ಸರಿಯಾದ ಆಯ್ಕೆ ಎಂದು ಸಾಬೀತಾಗುವಂತಿದೆ. ಸಾತ್ವಿಕಾ ಪಾತ್ರಕ್ಕೆ ತಕ್ಕಂತೆ ವಸ್ತ್ರ ವಿನ್ಯಾಸದ ಪ್ರಕಟಿಸುವಿಕೆಯಲ್ಲೂ ಗಮನ ಸೆಳೆದಿದ್ದಾರೆ. ಖಳನಾಗಿ ಪ್ರದೀಪ್ ವರ್ಮ ನಾಯಕನನ್ನು ಓವರ್ ಟೇಕ್ ಮಾಡುವಂತೆ ಕಾಣಿಸಿಕೊಂಡಿದ್ದಾರೆ. ಆದರೆ ಒಟ್ಟು ಸಿನಿಮಾ ನೋಡುವಾಗ ನಮ್ಮೆಲ್ಲರ ಅಂತರಂಗದೊಳಗಿನ‌ ಪ್ರೇಮಕ್ಕೆ ಹೊಸ ರಂಗು ತುಂಬುವುದರಲ್ಲಿ ಸಂದೇಹವಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!