ಸಣ್ಣ ಬಜೆಟ್ನಲ್ಲಿ ನಿರ್ಮಾಣವಾಗಿರುವ ತೆಲುಗಿಗೆ ಡಬ್ ಆಗಿದ್ದು, ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾವನ್ನು ಹಿಂದಿಕ್ಕಿದೆ.
‘ಪ್ರೇಮದ ಊರಲಿ’ ಈಗಾಗಲೇ ತೆಲುಗಿಗೆ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ಬಿಡುಗಡೆಯಾಗಿದೆ. ತೆಲುಗು ರಾಜ್ಯಗಳಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಅವಧಿಯಲ್ಲಿ ಬಿಡುಗಡೆಯಾದ ತೆಲುಗು ಸಿನಿಮಾ ‘ದಿ ಪ್ಯಾರಡೈಸ್’ಗಿಂತ ‘ಪ್ರೇಮದ ಊರಲಿ’ ಟಿಕೆಟ್ ಮಾರಾಟದಲ್ಲಿ ಮುನ್ನಡೆ ಸಾಧಿಸಿದೆ.
ಬುಕ್ಮೈಶೋನಲ್ಲಿ 24 ಗಂಟೆಗಳ ಅವಧಿಯಲ್ಲಿ ‘ಪ್ರೇಮದ ಊರಲಿ’ ಸಿನಿಮಾಗೆ 1.15 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿದೆ. ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾಗೆ 7 ಸಾವಿರ ಟಿಕೆಟ್ ಬುಕ್ ಆಗಿವೆ. ‘ದಿ ಪ್ಯಾರಡೈಸ್’ ಸೆಪ್ಟೆಂಬರ್ 24ರಂದು ಬಿಡುಗಡೆಯಾಗಿದ್ದರೆ, ‘ಪ್ರೇಮದ ಊರಲಿ’ ಸೆಪ್ಟೆಂಬರ್ 25ರಂದು ತೆರೆಗೆ ಬಂದಿತ್ತು.
ತೆಲುಗು ರಾಜ್ಯಗಳಲ್ಲಿ ‘ಪ್ರೇಮದ ಊರಲಿ’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಮೂರನೇ ದಿನದಿಂದಲೇ ಜನರು ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ಆರಂಭಿಸಿದ್ದಾರೆ. ಹಲವು ಸಾಮಾಜಿಕ ಜಾಲತಾಣದ ಇನ್ಫ್ಲ್ಯುಯೆನ್ಸರ್ಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಆರಂಭದಲ್ಲಿ ನಿಧಾನವಾಗಿದ್ದ ಸಿನಿಮಾದ ಬೇಡಿಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೆಚ್ಚಾದ ಬಳಿಕ ಏರಿಕೆಯಾಗಿದೆ.
‘ಪ್ರೇಮದ ಊರಲಿ’ ಸಿನಿಮಾದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀರಾಮ್ ನಾಯಕನಾಗಿ, ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದು, ಮಮತಾ ದೇವೇಂದ್ರ ನಿರ್ಮಾಣ ಮಾಡಿದ್ದಾರೆ. ಸನದ್ ಗೌತಮ್ ಸಂಗೀತ, ರಜಕಾಂತ್ ಎಸ್ಕೆ ಛಾಯಾಗ್ರಹಣ, ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ.
ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶಿಸಿದ್ದಾರೆ. ಖಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ಮೋಹನ್ ಬಾಬು, ಬಾಲಿವುಡ್ ನಟ ರಾಘವ್ ಜುಯೆಲ್ ಚಿತ್ರದಲ್ಲಿದ್ದಾರೆ. ಭರ್ಜರಿ ಆಕ್ಷನ್ ಹೊಂದಿರುವ ಸಿನಿಮಾ ಆರಂಭದ ಎರಡು ದಿನಗಳಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಆದರೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಎರಡನೇ ವಾರದಲ್ಲಿ ಟಿಕೆಟ್ ಮಾರಾಟ ಕಡಿಮೆಯಾಗಿದೆ.
—-





Be the first to comment