‘ಯುಐ’ ಸಿನಿಮಾದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮತ್ತೊಂದು ಹೊಸ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ.
ಚಿತ್ರೀಕರಣಗಳ ನಡುವೆ ಮುಂದಿನ ಸಿನಿಮಾದ ಕಥೆ ಬರೆಯುತ್ತಿರುವ ಉಪೇಂದ್ರ ಸದ್ಯದಲ್ಲೇ ತಮ್ಮ ಹೊಸ ನಿರ್ದೇಶನದ ಯೋಜನೆಯನ್ನು ಅಧಿಕೃತವಾಗಿ ಘೋಷಿಸುವ ಸುಳಿವು ನೀಡಿದ್ದಾರೆ. ಎರಡು ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡ ಬಳಿಕ ನಿರ್ದೇಶನದ ಕೆಲಸ ಆರಂಭಿಸುವುದಾಗಿ ತಿಳಿಸಿದ್ದಾರೆ.
‘ನಾನು ಒಂದು ಕಥೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಸದ್ಯ ಎರಡು ಸಿನಿಮಾಗಳ ಚಿತ್ರೀಕರಣ ಬಾಕಿ ಇದೆ. ಅವೆರಡನ್ನೂ ಮುಗಿಸಿದ ತಕ್ಷಣ ನಿರ್ದೇಶನದ ಕೆಲಸ ಆರಂಭಿಸುವ ಯೋಜನೆ ಇದೆ. ಶೀಘ್ರದಲ್ಲೇ ಸಿನಿಮಾ ಘೋಷಣೆ ಮಾಡಲಿದ್ದೇನೆ. ಘೋಷಣೆ ಮಾಡಿದಾಗ ಚಿತ್ರದ ಕಥಾವಸ್ತು ಏನೆಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಸಿಗಲಿದೆ’ ಎಂದು ಉಪೇಂದ್ರ ಹೇಳಿದ್ದಾರೆ.
ಉಪೇಂದ್ರ ಅವರು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ತಮಿಳು ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಸಾಂಪ್ರದಾಯಿಕ ಜಾನಪದ ಕಲೆಯಾದ ಪುಲಿಯಾಟ್ಟಂ ಹಿನ್ನೆಲೆಯನ್ನು ಹೊಂದಿದೆ. ಇದರಲ್ಲಿ ಉಪೇಂದ್ರ ಜೊತೆಗೆ ಪ್ರಭುದೇವ ಮತ್ತು ಅಥರ್ವ ನಟಿಸುತ್ತಿದ್ದಾರೆ.
ಜೊತೆಗೆ ಉಪೇಂದ್ರ ಅವರ ಮುಂದಿನ ಕನ್ನಡ ಚಿತ್ರ ‘ನೆಕ್ಸ್ಟ್ ಲೆವೆಲ್’ ಚಿತ್ರೀಕರಣದ ವೇಳಾಪಟ್ಟಿನಿಗದಿಯಾಗಿದೆ. ಅರವಿಂದ್ ಕೌಶಿಕ್ ನಿರ್ದೇಶನದ ಈ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಆರಾಧನಾ ರಾಮ್ ನಾಯಕಿಯಾಗಿದ್ದಾರೆ.
—–





Be the first to comment