ನಟ ಪ್ರಕಾಶ್ ರೈ ತಾವು ಹುಟ್ಟಿ ಬೆಳೆದ ಕ್ಷೇತ್ರದಿಂದಲೇ ತಮ್ಮ ಮತವನ್ನು ತೆಗೆದುಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಸ್ಐಆರ್ ಅಡಿಯಲ್ಲಿ ಬೆಂಗಳೂರಿನಿಂದ ಡಿಲೀಟ್ ಆಗಿರುವ 65 ಲಕ್ಷ ಮತದಾರರಲ್ಲಿ ತಾನೂ ಒಬ್ಬ ಎಂದು ಪ್ರಕಾಶ್ ರೈ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡು ತಿಳಿಸಿದ್ದಾರೆ.
ಇದೇ ಕ್ಷೇತ್ರದಿಂದ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗಿ ಹೇಳಿದ್ದಾರೆ. 2024ರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ನಲ್ಲಿ ಮತದಾನ ಮಾಡಿದ್ದಾಗಿ ತಿಳಿಸಿದ್ದಾರೆ. ಹೀಗಿದ್ದರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರಶ್ನಿಸಿರುವ ಅವರು, ‘ಇದು ಜೋಕ್ ಅಲ್ಲದೆ ಮತ್ತೇನು?’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಕಾಶ್ ರೈ ಅವರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. 2019ರಲ್ಲೇ ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು. ಬೆಂಗಳೂರಿನ ಶಾಂತಿನಗರ, ಚೆನ್ನೈನ ವಲಚೇರಿ ಹಾಗೂ ತೆಲಂಗಾಣದ ಸೆರಿಲಿಂಗಂಪಲ್ಲಿ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಪ್ರಕಾಶ್ ರೈ ಅವರ ಹೆಸರು ಇದೆ ಎಂದು ಆರೋಪಿಸಲಾಗಿತ್ತು.
ಪ್ರಕರಣದ ವಿಚಾರಣೆಗೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ 2025ರಲ್ಲಿ ನ್ಯಾಯಾಲಯ ಪ್ರಕಾಶ್ ರೈ ವಿರುದ್ಧ ವಾರೆಂಟ್ ಹೊರಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10, 2026ರಂದು ಅವರು ಷರತ್ತುಬದ್ಧ ಜಾಮೀನು ಪಡೆದಿದ್ದಾರೆ. ಪ್ರಕರಣ ಸದ್ಯ ವಿಚಾರಣೆಯ ಹಂತದಲ್ಲಿದೆ.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಪ್ರಕಾಶ್ ರೈ ಅವರ ಮತ ಡಿಲೀಟ್ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ ಡಿಲೀಟ್ ಆಗಿರುವ ನಿಖರ ಕಾರಣದ ಬಗ್ಗೆ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಬರಬೇಕಿದೆ.
‘ನನ್ನ ಮತ ಡಿಲೀಟ್ ಆಗಿದೆ. ಅದನ್ನು ಮರಳಿ ಪಡೆಯಲು ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೇನೆ’ ಎಂದು ಪ್ರಕಾಶ್ ರೈ ಹೇಳಿದ್ದಾರೆ.
—-





Be the first to comment