“ತಾಜ್ ಮಹಲ್”, ” ಚಾರ್ ಮಿನಾರ್”, “ಮೈಲಾರಿ” ಹಾಗೂ ಪ್ಯಾನ್ ಇಂಡಿಯಾ “ಕಬ್ಜ” ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳ ನಿರ್ದೇಶಕ ಆರ್ ಚಂದ್ರು, ಎರಡೂವರೆ ವರ್ಷಗಳ ನಂತರ, “ಒರಿಜಿನಲ್ ಮಾನ್ ಸ್ಟರ್” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆನಂದ್ ಪಂಡಿತ್ ಅರ್ಪಿಸುವ, ಆರ್ ಸಿ ಸ್ಟುಡಿಯೋಸ್ ಲಾಂಛನದಲ್ಲಿ ಯಮುನಾ ಚಂದ್ರು ಅವರು ನಿರ್ಮಿಸುತ್ತಿರುವ ಹಿಂದಿ ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ “ಒರಿಜಿನಲ್ ಮಾನ್ ಸ್ಟರ್” ಚಿತ್ರದ ಮುಹೂರ್ತ ಸಮಾರಂಭ ಕೆಂಗೇರಿಯ ಮೋದಿ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಗೀತಾ ಶಿವರಾಜಕುಮಾರ್, ನೈಸ್ ಸಂಸ್ಥೆಯ ಅಶೋಕ್ ಖೇಣಿ, ಮಾಧವ ಕಿರಣ್, ನಿರ್ಮಾಪಕರಾದ ಉದಯ್ ಕೆ ಮೆಹ್ತ, ಗಂಗಾಧರ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇತ್ತೀಚೆಗೆ ಮುಂಬೈನಲ್ಲಿ ನಮ್ಮ “ಒರಿಜಿನಲ್ ಮಾನ್ ಸ್ಟರ್” ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು. ಆದರೆ, ನಾನು ಚಿತ್ರರಂಗಕ್ಕೆ ಬಂದ ದಿನದಿಂದ ನನ್ನ ಪ್ರೋತ್ಸಾಹಿಸುತ್ತಾ ಬಂದಿರುವ ಇಲ್ಲಿನ ಮಾಧ್ಯಮದವರ ಸಮ್ಮುಖದಲ್ಲಿ ನಮ್ಮ ಚಿತ್ರದ ಮುಹೂರ್ತ ಸಮಾರಂಭ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಬೇಕೆಂದು ನನ್ನ ಆಸೆಯಾಗಿತ್ತು. ಇಂದಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಸೂಪರ್ ಹಿಟ್ “ಮೈಲಾರಿ” ಹಾಗೂ “ಕಬ್ಜ” ಚಿತ್ರಗಳ ನಂತರ ಶಿವರಾಜಕುಮಾರ್ ಅವರ ಅಭಿನಯದ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಅವರ ಬೆಂಬಲ ನನಗೆ ಸದಾ ಇರುತ್ತದೆ. ತೆಲುಗಿನ ಹೆಸರಾಂತ ನಟ ಸುನೀಲ್ ಅವರು ಕೂಡ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಇದೊಂದು ಅದ್ದೂರಿ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಬರಲಿದೆ. ಭಾರತದ ಜನಪ್ರಿಯ ನಟರು ಈ ಚಿತ್ರದ ತಾರಾಬಳಗದಲ್ಲಿರುತ್ತಾರೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಮಾಹಿತಿ ನೀಡುತ್ತೇನೆ. ಬೆಂಗಳೂರಿನ ಎಚ್ ಎಂ ಟಿ ಮೈದಾನದಲ್ಲಿ ಬೃಹತ್ ಸೆಟ್ ಕೂಡ ನಿರ್ಮಾಣವಾಗಿದ್ದು, ಮೊದಲ ಹಂತದ ಚಿತ್ರೀಕರಣ ಅಲ್ಲಿ ನಡೆಯಲಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಅರ್ ಚಂದ್ರು ತಿಳಿಸಿದರು.

ನನಗೆ ಕಥೆ ಇಷ್ಟವಾಗದೆ ಇದ್ದರೆ ನಾನು ಚಿತ್ರ ಒಪ್ಪಿಕೊಳ್ಳುವುದಿಲ್ಲ. ಆರ್ ಚಂದ್ರು ಅವರು ಹೇಳಿದ ಈ ಚಿತ್ರದ ಕಥೆ ಇಷ್ಟವಾಯಿತು. ಚಂದ್ರು ಅವರ ನಿರ್ದೇಶನದಲ್ಲಿ “ಮೈಲಾರಿ”, ” ಕಬ್ಜ” ಚಿತ್ರಗಳ ನಂತರ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. “ಒರಿಜಿನಲ್ ಮಾನ್ ಸ್ಟರ್”, ” ಮಾನ್ ಸ್ಟರ್ ” ಎಂದರೆ ದೈತ್ಯ ಅಂತ. ಆದರೆ ಆ ದೈತ್ಯನಲ್ಲೂ ಬರೀ ದೈತ್ಯತನವಲ್ಲದೆ ಬೇರೆ ಒಂದು ಲೈನ್ ಇದೆ. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಇನ್ನೂ, ಚಂದ್ರು ಎಮೋಷನ್ ಅಂಶಗಳನ್ನು ಬಹಳ ಚೆನ್ನಾಗಿ ನಿರ್ದೇಶಿಸುತ್ತಾರೆ. ಈ ಚಿತ್ರದಲ್ಲಿ ಎಮೋಷನ್ ಅಂಶ ಕೂಡ ಹೈಲೆಟ್ ಆಗಲಿದೆ. ಒಟ್ಟಿನಲ್ಲಿ ನಾನು ಈವರೆಗೂ ಮಾಡಿರದ ಪಾತ್ರವಿದು. ತೆಲುಗು ಮಿಶ್ರಿತ ಕನ್ನಡದಲ್ಲಿ ನನ್ನ ಸಂಭಾಷಣೆ ಇರುತ್ತದೆ. ಸುನೀಲ್ ಅವರ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ. ಎ ಜೆ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಹಿಂದಿ ಹಾಗೂ ಕನ್ನಡದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ ಚಂದ್ರು ಅವರ ಜೊತೆಗೆ “ಮೈಲಾರಿ 2” ಚಿತ್ರ ಕೂಡ ಮಾಡುತ್ತೇನೆ ಎಂದು ನಾಯಕ ಶಿವರಾಜಕುಮಾರ್ ಹೇಳಿದರು.

ನಾನು, ಶಿವರಾಜಕುಮಾರ್ ಅವರ “ಓಂ” ಚಿತ್ರವನ್ನು ಸಾಕಷ್ಟು ಸಲ ನೋಡಿದ್ದೇನೆ. ಅವರ ಜೊತೆಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಸಂತೋಷವಾಗಿದೆ. ಶಿವಣ್ಣ ಅವರು ಹೇಳಿದ ಹಾಗೆ ಈ ಚಿತ್ರದ ಎಮೋಷನ್ ಅಂಶ ಎಲ್ಲರಿಗೂ ಬಹಳ ಇಷ್ಟವಾಗಲಿದೆ. ಆರ್ ಚಂದ್ರು ಉತ್ತಮವಾದ ಕಥೆ ಮಾಡಿಕೊಂಡಿದ್ದಾರೆ ಎಂದರು ನಟ ಸುನೀಲ್.





Be the first to comment