ಮುಧೋಳ್

‘ಮುಧೋಳ್’ನ ‘ಗುಚ್ಚಿ ಗರ್ಲ್’ ಮೂಲಕ ಬಂತು ಭರ್ಜರಿ ಅಪ್‌ಡೇಟ್!

ಸುಮಾರು ನಾಲ್ಕೈದು ವರ್ಷಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಶೇಷವೆಂದರೆ, ಇದೇ ಸಂದರ್ಭದಲ್ಲಿ ಬಹುಕಾಲದಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಮುಧೋಳ್’ ಸಿನಿಮಾದ ಬಹುನಿರೀಕ್ಷಿತ ಅಪ್‌ಡೇಟ್ ಕೂಡ ಹೊರಬಿದ್ದಿದೆ.

‘ಮುಧೋಳ್’ ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ ಬಿಡುಗಡೆಯಾಗಿದ್ದು, ಶೋಮ್ಯಾನ್ ನಿರ್ದೇಶಕ ಪ್ರೇಮ್ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕರಾದ ವಿಜಯ್ ಟಾಟಾ ಹಾಗೂ ಅಮೃತ ಟಾಟಾ, ನಿರ್ದೇಶಕ ಕಾರ್ತಿಕ್ ರಂಜನ್, ನಾಯಕಿ ಸಂಜನಾ ಆನಂದ್, ‘ಗುಚ್ಚಿ ಗರ್ಲ್’ ಹಾಡಿನ ನೃತ್ಯ ಕಲಾವಿದೆ ಇಷಿತಾ ರಾಜ್ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ನಿರ್ದೇಶಕ ಪ್ರೇಮ್ ಅವರ ಮಾತು. “ನನ್ನ ಬಾಸ್ ಮಗನ ಹಾಡನ್ನು ಬಿಡುಗಡೆ ಮಾಡುತ್ತಿರುವುದು ನನ್ನ ಪುಣ್ಯ” ಎಂದು ಹೇಳಿದ ಪ್ರೇಮ್, ‘ಮುಧೋಳ್’ ಚಿತ್ರದ ಮುಂದಿನ ಎಲ್ಲಾ ಬೆಳವಣಿಗೆಗಳಲ್ಲೂ ಚಿತ್ರತಂಡದೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದರು.

ಮುಧೋಳ್

ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಕ್ರಂ ರವಿಚಂದ್ರನ್, ನಿರ್ಮಾಪಕರಾದ ವಿಜಯ್ ಟಾಟಾ ಮತ್ತು ಅಮೃತ ಟಾಟಾ, ನಾಯಕಿ ಸಂಜನಾ ಆನಂದ್, ಸಹನಟ ಅಭಿಲಾಷ್ ಹಾಗೂ ನೃತ್ಯ ಕಲಾವಿದೆ ಇಷಿತಾ ರಾಜ್ ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಕ್ರಂ ರವಿಚಂದ್ರನ್, ‘ಮುಧೋಳ್’ ಪಕ್ಕಾ ಕಮರ್ಷಿಯಲ್ ಹಾಗೂ ಸಸ್ಪೆನ್ಸ್ ಓರಿಯೆಂಟೆಡ್ ಸಿನಿಮಾ ಎಂದು ಮಾಹಿತಿ ನೀಡಿದರು. ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ನಲ್ಲಿ ಸಂಜನಾ ಆನಂದ್ ಹಾಗೂ ಇಷಿತಾ ರಾಜ್ ನೃತ್ಯ ಮಾಡಿದ್ದು, ತಾವು ಕೂಡ ಹಾಡಿನಲ್ಲಿ ಒಂದೆರಡು ಸ್ಟೆಪ್ ಹಾಕಿರುವುದಾಗಿ ವಿಕ್ರಂ ತಿಳಿಸಿದರು.

ಇನ್ನು ಸಿನಿಮಾ ಇಷ್ಟು ವರ್ಷಗಳ ಕಾಲ ತಡವಾಗಿದ್ದಕ್ಕೆ ಕಾರಣವೇನು ಎಂಬ ಪ್ರಶ್ನೆಗೂ ವಿಕ್ರಂ ಉತ್ತರಿಸಿದ್ದಾರೆ. ನಿರ್ಮಾಪಕರಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು, ಚಿತ್ರದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಹಾಗೂ ಕಥೆಯಲ್ಲಿ ಮಾಡಲಾದ ಕೆಲವು ಬದಲಾವಣೆಗಳಿಂದ ಸಿನಿಮಾ ತಡವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

‘ಮುಧೋಳ್’ ಸಿನಿಮಾದ ಹಿಂದೆ ತಂದೆ ರವಿಚಂದ್ರನ್ ಅವರ ಸಲಹೆಯೂ ಇದೆ ಎನ್ನುವುದು ಮತ್ತೊಂದು ವಿಶೇಷ. ಅಷ್ಟೇ ಅಲ್ಲ, ‘ಮುಧೋಳ್’ ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಿದ್ದೂ ರವಿಚಂದ್ರನ್ ಅವರೇ ಎಂದು ವಿಕ್ರಂ ರವಿಚಂದ್ರನ್ ತಿಳಿಸಿದ್ದಾರೆ.

ವಿಕ್ರಂ ಸ್ವತಃ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ಬ್ಯುಸಿನೆಸ್ ದೃಷ್ಟಿಕೋನವೂ ಮುಖ್ಯವಾಗಿದ್ದು, ನಿರ್ಮಾಪಕರಿಗೆ ತಮ್ಮ ಕೆಲಸದ ಮೂಲಕ ಬ್ಯುಸಿನೆಸ್ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಟೆಕ್ನಿಷಿಯನ್ ಹಾಗೂ ಕಲಾವಿದನಿಗೂ ಇರಬೇಕು ಎಂಬ ಅಭಿಪ್ರಾಯವನ್ನು ವಿಕ್ರಂ ವ್ಯಕ್ತಪಡಿಸಿದ್ದಾರೆ. ಇದೇ ಕಾರಣದಿಂದ ಚಿತ್ರದ ಕೆಲಸಗಳು ನಿರೀಕ್ಷೆಗಿಂತ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿವೆ ಎಂದಿದ್ದಾರೆ.

‘ಮುಧೋಳ್’ ಚಿತ್ರದ ಮುಂದಿನ ಅಪ್‌ಡೇಟ್‌ಗಳು ಹಾಗೂ ಸಿನಿಮಾ ಬಿಡುಗಡೆಯ ದಿನಾಂಕದ ಕುರಿತು ಶೀಘ್ರದಲ್ಲೇ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದೆ.

ಒಟ್ಟಿನಲ್ಲಿ, ಐದು ವರ್ಷಗಳ ಬಳಿಕ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿಕ್ರಂ ರವಿಚಂದ್ರನ್, ‘ಗುಚ್ಚಿ ಗರ್ಲ್’ ಹಾಡಿನ ಬಿಡುಗಡೆಯ ಮೂಲಕ ‘ಮುಧೋಳ್’ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಮುಧೋಳ್

Be the first to comment

Leave a Reply

Your email address will not be published. Required fields are marked *

Translate »
error: Content is protected !!