‘ಫಸ್ಟ್ ರ್ಯಾಂಕ್ ರಾಜು’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಗುರುನಂದನ್ ಹಾಗೂ ‘ಪ್ರೇಮದ ಊರಲಿ’ ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ತಪಸ್ವಿನಿ ಪೂಣಚ್ಛ ನಾಯಕ-ನಾಯಕಿಯಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಮಿಸ್ಟರ್ ಜಾಕ್’. ಇವರಿಬ್ಬರ ವಿಭಿನ್ನ ಅಭಿನಯದ ಮೋಡಿ, ಹಾಸ್ಯ ಹಾಗೂ ಮನರಂಜನೆಯ ಸಮ್ಮಿಲನದೊಂದಿಗೆ ಮೂಡಿಬಂದಿರುವ ಈ ಚಿತ್ರ ಪ್ರೇಕ್ಷಕರಿಗೆ ನಗುವಿನ ಹಬ್ಬ ನೀಡಲು ಸಜ್ಜಾಗಿದೆ.
ಮಂಡಿಮನೆ ಟಾಕೀಸ್ ಲಾಂಛನದಲ್ಲಿ ನಟ ಗುರುನಂದನ್ ಅವರು ತಮ್ಮ ಸ್ನೇಹಿತರೊಡಗೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ಸುಮಂತ್ ನಿರ್ದೇಶನ ಮಾಡಿದ್ದಾರೆ.
ಚಿತ್ರದ ಆರಂಭದಿಂದಲೂ ಟೀಸರ್ ಹಾಗೂ ಹಾಡುಗಳ ಮೂಲಕ ‘ಮಿಸ್ಟರ್ ಜಾಕ್’ ಸಾಕಷ್ಟು ಕುತೂಹಲ ಮೂಡಿಸಿದೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರದ ಮೊದಲ ಹಾಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ನಾಡಹಬ್ಬ ದಸರಾ ಸಂದರ್ಭದಲ್ಲಿ ಮತ್ತೊಂದು ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿತ್ತು. ಹೆಸರಾಂತ ಗೀತರಚನೆಕಾರರ ಸಾಹಿತ್ಯ ಹಾಗೂ ಗಾಯಕ – ಗಾಯಕಿಯರ ಸುಮಧುರ ಗಾಯನದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಟೀಸರ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ, ಸುಶ್ಮಿತ ಜಗ್ಗಪ್ಪ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರಿದ್ದಾರೆ.
ಶಿವಸೇನ ಛಾಯಾಗ್ರಹಣ, ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಹಾಗೂ ವಿಜಯ್ ರಾಜ್ ಸಂಕಲನ ಚಿತ್ರಕ್ಕಿದೆ.
ಚಿತ್ರದ ಬಿಡುಗಡೆಗೆ ಪೂರ್ವಭಾವಿಯಾಗಿ ನವೆಂಬರ್ 15ರಂದು ಓರಾಯನ್ ಮಾಲ್ನಲ್ಲಿ ಅದ್ಧೂರಿ ಟ್ರೇಲರ್ ಅನಾವರಣ ಹಾಗೂ ಪ್ರೀ-ರಿಲೀಸ್ ಈವೆಂಟ್ ಆಯೋಜಿಸಲಾಗಿದೆ. ಕನ್ನಡ ಚಿತ್ರರಂಗದ ಹೆಸರಾಂತ ಗಣ್ಯರು, ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ಮೆರುಗು ಬರಲಿದೆ.
ಗುರುನಂದನ್ ಹಾಗೂ ತಪಸ್ವಿನಿ ಪೂಣಚ್ಚ ಅವರ ಹೊಸ ಜೋಡಿ, ಮನರಂಜನಾತ್ಮಕ ಕಥಾಹಂದರ ಹಾಗೂ ಹಾಸ್ಯದ ರಸದೌತಣದೊಂದಿಗೆ ಮೂಡಿಬಂದಿರುವ ‘ಮಿಸ್ಟರ್ ಜಾಕ್’ ಚಿತ್ರ ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ.






Be the first to comment