ಹರಿವರಾಸನಂ ತಾವೇ ಬರೆದ ‘ಅವನಿ’ ಎಂಬ ಕಾದಂಬರಿಯನ್ನಾಧರಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಚಿತ್ರ ‘ಮಗ್ಗಿಪುಸ್ತಕ’ ಇದೀಗ ಯಶಸ್ವಿಯಾಗಿ ೫೦ ದಿನಗಳನ್ನು ಪೂರೈಸಿ ಮುನ್ನಡೆದಿದೆ. ಬಡ ಕುಟುಂಬದ ಅವನಿ ಎಂಬ ಹೆಣ್ಣು ಮಗಳ ಸುತ್ತ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಹರಿವರಾಸನಂ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಐವತ್ತರ ಸಂಭ್ರಮದ ಸಮಾರಂಭ ಮಂಗಳವಾರ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದಲ್ಲಿ ಕೆಲಸ ಮಾಡಿ ಗೆಲುವಿಗೆ ಕಾರಣರಾದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಮರಣಫಲಕ ನೀಡಿ ಗೌರವಿಸಲಾಯಿತು.
೪ ಆಯಾಮಗಳಲ್ಲಿ ನಡೆಯುವ ಕಥೆ ಒಳಗೊಂಡ ಈ ಚಿತ್ರದಲ್ಲಿ ಮಕ್ಕಳ ಜತೆಗೆ ಪೋಷಕರಿಗೂ ಉತ್ತಮ ಸಂದೇಶವಿದೆ. ನಿರ್ದೇಶಕ ಹರಿವರಾಸನಂ ತಮ್ಮ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ನಾಡಿ ಮಿಡಿತವನ್ನರಿತು ಚಿತ್ರ ನಿರೂಪಿಸಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಪೋಷಕರು ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸದ್ಯ ಈ ಚಿತ್ರ ಉತ್ತರ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿನ್ನಸ್ವಾಮಿ ಫಿಲಂಸ್ ಅಡಿ ಎತಿರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. “ಮಗ್ಗಿಪುಸ್ತಕ” ಎಂಬುದು ಬದುಕಿನ ಲೆಕ್ಕಾಚಾರವಾಗಿದ್ದು, ಜೀವನವೇ ಒಂದು ಮಗ್ಗಿ ಪುಸ್ತಕವಿದ್ದಂತೆ; ಇದರಲ್ಲಿ ಒಳ್ಳೆಯದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಅಜ್ಞಾನವನ್ನು ಗುಣಿಸಬೇಕು, ಜ್ಞಾನವನ್ನು ಭಾಗಿಸಬೇಕು ಎಂಬ ಸಂದೇಶವಿದೆ.

ವೇದಿಕೆಯಲ್ಲಿ ಮಾತನಾಡಿದ ಹರಿವರಾಸನಂ, “ಇಡೀ ಚಿತ್ರತಂಡದ ಪರಿಶ್ರಮವೇ ಈ ಯಶಸ್ಸಿಗೆ ಕಾರಣ. ನಮ್ಮ ಚಿತ್ರ ೧೦೦ ದಿನಗಳನ್ನೂ ಪೂರೈಸಬೇಕೆಂಬ ಆಸೆಯಿದೆ. ಚಿತ್ರವೀಗ ೧೩ ಥೇಟರ್‌ಗಳಲ್ಲಿ ರನ್ ಆಗುತ್ತಿದೆ. ಮುಂದಿನ ವಾರದಿಂದ ರಜೆ ಪ್ರಾರಂಭವಾಗುತ್ತಿದ್ದು, ಮತ್ತಷ್ಟು ಥೇಟರ್‌ಗಳು ಸೇರ್ಪಡೆಯಾಗುತ್ತಿವೆ,” ಎಂದು ಹೇಳಿದರು. ನಿರ್ಮಾಪಕ ಎತಿರಾಜ್ ಮಾತನಾಡುತ್ತಾ, ತಮ್ಮ ಚಿತ್ರ ೫೦ ದಿನ ಓಡಿದ್ದೇ ಖುಷಿಯ ವಿಚಾರ ಎಂದು ತಂತ್ರಜ್ಞರಿಗೆ ಕೃತಜ್ಞತೆ ಸಲ್ಲಿಸಿದರು. ಸಂಗೀತ ನಿರ್ದೇಶಕ ಯಶಸ್ ನಾಚಪ್ಪ ಹಾಗೂ ಛಾಯಾಗ್ರಾಹಕ ನಂದಕುಮಾರ್ ಕೂಡ ಈ ಯಶಸ್ಸಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಚಿತ್ರದ ಓಟಿಟಿ ಹಕ್ಕನ್ನು ಅಮೆಜಾನ್ ಸಂಸ್ಥೆ ಪಡೆದಿದೆ ಎಂದು ನಿರ್ದೇಶಕರು ಇದೇ ವೇಳೆ ತಿಳಿಸಿದರು.
ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುಮಾರು ೮೦ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಒಟ್ಟು ೭ ಹಾಡುಗಳಿದ್ದು, ಎಂ.ಎಂ. ಕೀರವಾಣಿ ಅವರು ಹಾಡೊಂದಕ್ಕೆ ಧನಿಯಾಗಿರುವುದು ವಿಶೇಷ. ಉಳಿದಂತೆ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್ ಸೇರಿದಂತೆ ೧೭ ಜನ ಗಾಯಕರು ಹಾಡಿದ್ದಾರೆ. ಈ ಚಿತ್ರವನ್ನು ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಅವರು ರಿಲೀಸ್ ಮಾಡಿದ್ದರು. ಈ ಸಂಸ್ಥೆಯಿಂದ ಬಿಡುಗಡೆಯಾದ ‘ಕಂಗ್ರಾಚುಲೇಶನ್ಸ್ ಬ್ರದರ್’ ಚಿತ್ರದ ನಂತರ ೫೦ ದಿನ ಪೂರೈಸಿದ ಎರಡನೇ ಚಿತ್ರ ಇದಾಗಿದೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಂಜನ್ ಕಾಸರಗೋಡು, ರಾನ್ವಿ ಶೇಖರ್, ಮಹೇಶ್, ಮೋಹಿತ್, ಮೈಸೂರು ರಮಾನಂದ್, ಮೂಗು ಸುರೇಶ್, ಪಂಕಜ, ಅಗಸ್ತ್ಯ, ಮೇಘಶ್ರೀ, ರಕ್ಷಾ ಗೌಡ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಘು ರಾಮನಕೊಪ್ಪ ಹಾಗೂ ತಾಂತ್ರಿಕ ವರ್ಗದವರಿಗೂ ಸಮಾರಂಭದಲ್ಲಿ ಸ್ಮರಣಫಲಕ ನೀಡಿ ಗೌರವಿಸಲಾಯಿತು.






Be the first to comment