ಪ್ರತಿ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ, ಮನಸ್ಸಿಗೆ ಹತ್ತಿರವಾಗುವ ಕಥೆಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ, ತನ್ನ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸುತ್ತಿದೆ. ಕನ್ನಡದ ಸೂಪರ್ಹಿಟ್ ಲವ್ ಮಾಕ್ಟೇಲ್ ಸೀರಿಸ್ ನ ಬಹು ನಿರೀಕ್ಷಿತ ಕೊನೆಯ ಭಾಗವಾದ ಲವ್ ಮಾಕ್ಟೇಲ್ 3 ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಅನ್ನು ಜೂನ್ 21 ರಂದು, ಸಂಜೆ 4:30 ಕ್ಕೆ ನಿಮ್ಮ ಮುಂದೆ ತರಲು ಸಿದ್ಧವಾಗಿದೆ.
ಲವ್ ಮಾಕ್ಟೇಲ್ 2 ಚಿತ್ರದ ನಂತರ ಹಲವು ವರ್ಷಗಳ ಬಳಿಕ ತೆರೆಕಂಡ ಲವ್ ಮಾಕ್ಟೇಲ್ 3 ಚಿತ್ರದಲ್ಲಿ ತಂದೆಯ ಪ್ರೀತಿ, ಕುಟುಂಬದ ಒಡನಾಟ, ಜವಾಬ್ದಾರಿ ಮತ್ತು ಎಂತಹ ಪರಿಸ್ಥಿತಿಯಲ್ಲೂ ಜೊತೆಗೆ ನಡೆದು ಸಾಗುವ ಕೌಟುಂಬಿಕ ಮೌಲ್ಯಗಳನ್ನು ತುಂಬಾ ಸುಂದರವಾಗಿ ತೋರಿಸಿದ್ದಾರೆ. ರಕ್ತ ಸಂಬಂಧಕ್ಕಿಂತ ಮಿಗಿಲಾದುದು ಏನೂ ಇಲ್ಲ ಎಂಬುದೇ ಈ ಚಿತ್ರದ ಮತ್ತೊಂದು ಹೈಲೈಟ್. ಭಾವನೆಗಳ ಹಲವು ಪದರಗಳನ್ನು ಒಳಗೊಂಡಿರುವ ಈ ಕಥೆ, ಪ್ರೀತಿ, ನೋವು ಮತ್ತು ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸಂಬಂಧಗಳನ್ನು ಹೇಗೆ ಕಾಪಾಡಿಕೊಳ್ಳುತ್ತವೆ ಎಂಬುದನ್ನು ಮನಮುಟ್ಟುವಂತೆ ಹೇಳುತ್ತದೆ. ಜೊತೆಗೆ, ಕಾಳಜಿ, ನಂಬಿಕೆ ಮತ್ತು ಬದ್ಧತೆಯ ಮೂಲಕ ಕಟ್ಟಿಕೊಳ್ಳುವ ಸಂಬಂಧಗಳು ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ಮನಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ ಸುನಿಲ್, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್ ಹಾಗೂ ಶ್ವೇತಾ ಆರ್. ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಕಥೆಯ ಹೀರೋ ಆದಿತ್ಯ ಅಲಿಯಾಸ್ ಆದಿ (ಡಾರ್ಲಿಂಗ್ ಕೃಷ್ಣ), ತಾನು ದತ್ತು ಪಡೆದ ಮಗಳು ನಿಧಿಯನ್ನು ತನ್ನ ಸ್ವಂತ ಮಗಳಂತೆ ಜವಾಬ್ದಾರಿಯಿಂದ ಸಾಕುತ್ತಿರುತ್ತಾನೆ. ಆದಿ ಮತ್ತು ನಿಧಿಯ ಬದುಕು ಸಣ್ಣ ಸಣ್ಣ ಸಂತೋಷಗಳು, ಸುಂದರ ನೆನಪುಗಳು ಮತ್ತು ಅಪ್ಪ-ಮಗಳ ಅಚ್ಚುಮೆಚ್ಚಿನ ಬಾಂಧವ್ಯದ ಸುತ್ತ ಸಾಗುತ್ತದೆ. ಕೇರ್ ಟೇಕರ್ ಜಗ್ಗಾ ಮಮ್ಮಿ ಮತ್ತು ಆತ್ಮೀಯ ಸ್ನೇಹಿತ ವಿಜಯ್ನ ಬೆಂಬಲ ಇವರಿಗೆ ಸದಾ ಇರತ್ತೆ. ಆದರೆ, ಡಾ. ಶಾಂತಾ ಅವರು ನಿಧಿ ತನ್ನ ಸ್ವಂತ ಮೊಮ್ಮಗಳು ಎಂದು ಹೇಳಿಕೊಂಡು ಬಂದಾಗ, ಆದಿ ಮತ್ತು ನಿಧಿಯ ಶಾಂತ ಜೀವನದಲ್ಲಿ ದೊಡ್ಡ ತಿರುವು ಉಂಟಾಗುತ್ತದೆ. ಅಲ್ಲಿಂದ ಆರಂಭವಾಗುವ ಕಾನೂನು ಹೋರಾಟ ಮತ್ತು ಭಾವನಾತ್ಮಕ ಸಂಘರ್ಷ, ಅವರ ಬದುಕನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಸವಾಲಿನ ಮೇಲೆ ಸವಾಲುಗಳು ಎದುರಾಗುತ್ತಿದ್ದಂತೆ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಾಗ, ತಾನು ಪ್ರೀತಿಯಿಂದ ಕಟ್ಟಿಕೊಂಡಿರುವ ಸುಂದರವಾದ ಕುಟುಂಬವನ್ನು ಉಳಿಸಿಕೊಳ್ಳಲು ಆದಿ ಮಾಡುವ ಹೋರಾಟ ಮನಕಲಕುವಂತಿದೆ.
ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗಳು ನಿಧಿಯಿಂದ ದೂರವಾಗುವ ಪರಿಸ್ಥಿತಿಯನ್ನು ಆದಿ ಹೇಗೆ ಎದುರಿಸುತ್ತಾನೆ? ಪ್ರೀತಿಯಿಂದ ಕಟ್ಟಿಕೊಂಡಿರುವ ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಅವನು ನಡೆಸುವ ಹೋರಾಟ ಸುಖಾಂತ್ಯ ಕಾಣುತ್ತಾ? ಇವೆಲ್ಲವನ್ನೂ ತಿಳ್ಕೊಳೋಕೆ ವೀಕ್ಷಿಸಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಲವ್ ಮಾಕ್ ಟೈಲ್ 3 ಜೂನ್ 21 ರಂದು ಸಂಜೆ 4:30 ರಿಂದ






Be the first to comment