‘ಕರಾವಳಿ’ ಟ್ರೇಲರ್ ಲಾಂಚ್​​ಗೆ ಪ್ರಜ್ವಲ್​​​ಗೇ ಇಲ್ಲ ಆಹ್ವಾನ!

ಬಹುನಿರೀಕ್ಷಿತ ‘ಕರಾವಳಿ’  ಸಿನಿಮಾದ ಟ್ರೇಲರ್ ಲಾಂಚ್​​ನಲ್ಲಿ  ಪ್ರಜ್ವಲ್ ದೇವರಾಜ್ ಅವರನ್ನು ಕಾರ್ಯಕ್ರಮಕ್ಕೆ ಚಿತ್ರತಂಡ ಆಹ್ವಾನಿಸಿಲ್ಲ ಎಂದು ಅಭಿಮಾನಿಗಳು ತೀವ್ರ ಬೇಸರ ಹೊರ ಹಾಕಿದ್ದಾರೆ.

ಗಾಂಧಿನಗರದ ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ ‘ಕರಾವಳಿ’   ಚಿತ್ರದ ಟ್ರೇಲರ್ ಲಾಂಚ್ ಹಮ್ಮಿಕೊಳ್ಳಲಾಗಿತ್ತು.  ನಿರೂಪಕಿ ಅನುಶ್ರೀ  ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು.  ಕಾರ್ಯಕ್ರಮದ ಮಧ್ಯದಲ್ಲೇ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಪ್ರಜ್ವಲ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲಎಂದು ಗದ್ದಲ ಸೃಷ್ಟಿಸಿದರು.

ವೇದಿಕೆ ಬಳಿ ನುಗ್ಗಿದ ಅಭಿಮಾನಿಗಳು ಕಾರ್ಯಕ್ರಮಕ್ಕೆ ತಡೆಯೊಡ್ಡಿದರು. ಕಾರ್ಯಕ್ರಮದಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ಚಿತ್ರತಂಡದ ಸದಸ್ಯರ ನಡುವೆ ಮತ್ತು ಪ್ರಜ್ವಲ್ ಅಭಿಮಾನಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

‘ರಾತ್ರಿವರೆಗೂ ಪ್ರಜ್ವಲ್ ಅವರು ಬರುತ್ತೇನೆ ಎಂದಿದ್ದರು.  ಅವರ ಅಭಿಮಾನಿಗಳಿಗೂ ಪಾಸ್ ವ್ಯವಸ್ಥೆ ಮಾಡಲಾಗಿತ್ತು . ಪ್ರಜ್ವಲ್ ಅವರ ಧ್ವನಿ ಈ ಪಾತ್ರಕ್ಕೆ ಸೂಟ್ ಆಗುತ್ತದೋ ಇಲ್ಲವೋ ಎಂಬ ಅನುಮಾನವಿತ್ತು. ಆದರೂ ಅವರಿಗಾಗಿ ಡಬ್ಬಿಂಗ್ ಸ್ಟುಡಿಯೋ ಬ್ಲಾಕ್ ಮಾಡಲಾಗಿತ್ತು . ಟ್ರೈಲರ್ ಮುಗಿದ ನಂತರ ಡಬ್ ಮಾಡಿ ಎಂದು ಹೇಳಿದ್ದೆವು. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದರು ಗುರುದುತ್ ಗಾಣಿಗ.

‘ಪ್ರಜ್ವಲ್ ಅವರಿಗೆ 1.25 ಕೋಟಿ  ರೂಪಾಯಿ ಪೇಮೆಂಟ್ ನಿಗದಿಯಾಗಿದ್ದು, ಈಗಾಗಲೇ 1 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು 25 ಲಕ್ಷ ರೂಪಾಯಿ ಕೊಡುವುದು ಬಾಕಿ ಇದೆ. ಪೋಸ್ಟರ್‌ಗಳಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೆಸರೇ ಪ್ರಮುಖವಾಗಿದೆ. ರಾಜ್ ಬಿ. ಶೆಟ್ಟಿ ಹಾಗೂ ಮಿತ್ರ ಅವರ ಹೆಸರುಗಳೇ ಇಲ್ಲ’ ಎಂದರು.

ಪ್ರಜ್ವಲ್ ಅಭಿಮಾನಿಗಳ ಆಕ್ರೋಶಕ್ಕೆ ನಟ ರಾಜ್ ಬಿ. ಶೆಟ್ಟಿ ತೀಕ್ಷ್ಣವಾಗಿ ರಿಯಾಕ್ಷನ್ ನೀಡಿದರು. ‘ನಾನು ಈ ಸಿನಿಮಾದಲ್ಲಿ ಕೇವಲ ಅತಿಥಿ ಪಾತ್ರ ಮಾಡಿದ್ದೇನೆಯೇ ಹೊರತು, ನಾನಿಲ್ಲಿ ಯಾರಿಗೂ ಕಾಂಪಿಟಿಷನ್ ಮಾಡಲು ಬಂದಿಲ್ಲ. ಚಿತ್ರತಂಡದ ಮೊದಲ ಆಯ್ಕೆ ನಾನಾಗಿರಲಿಲ್ಲ. ಸಿನಿಮಾದಲ್ಲಿ ನನ್ನ ಹೆಸರು ಹಾಕದಿದ್ದರೂ ನನಗೆ ಬೇಸರವಿಲ್ಲ. ನನಗಿಂತ ಸಿನಿಮಾ ದೊಡ್ಡದು. ಇದು ಇಡೀ ದೇಶವೇ ನೋಡುವಕಥೆಯಾಗಿದೆ. ನನಗೆ ಕಟೌಟ್ ಹಾಕಿ ಎಂದು ನಾನು ಎಂದೂ ಕೇಳಿಲ್ಲ’ ಎಂದರು ರಾಜ್ ಶೆಟ್ಟಿ.

‘ನಮ್ಮ ಇಂಡಸ್ಟ್ರಿ ಯಾಕೆ ಉದ್ದಾರ ಆಗುತ್ತಿಲ್ಲ ಎಂದರೆ ಇಂತಹ ಘಟನೆಗಳು ಕಾರಣ.  ಈ ಸಿನಿಮಾ ಮೂಲಕ ಪ್ರಜ್ವಲ್ ಅವರಿಗೆ ದೊಡ್ಡ ಹೆಸರು ಬಂದರೆ ನನಗೇ ಹೆಮ್ಮೆ ಅನಿಸುತ್ತದೆ’ ಎಂದರು ರಾಜ್ ಶೆಟ್ಟಿ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!