ರಾಮ್ ಚರಣ್ ಅಭಿನಯದ ಸಿನಿಮಾ ‘ಪೆದ್ದಿ’ ಜುಲೈ 9ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದೆ. ತೆಲುಗಿನ ಜೊತೆಗೆ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಆದರೆ ಹಿಂದಿ ಆವೃತ್ತಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವುದಿಲ್ಲ. ಅದು ಮತ್ತೊಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಗ್ರಾಮೀಣ ಹಿನ್ನೆಲೆಯ ಪ್ರತಿಭಾವಂತ ಕ್ರೀಡಾಪಟುವೊಬ್ಬನ ಬದುಕಿನ ಸುತ್ತ ಸಾಗುವ ಕಥಾಹಂದರ ಹೊಂದಿದೆ. ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ 400 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿರುವುದಾಗಿ ವರದಿಯಾಗಿದೆ.
ಸಿನಿಮಾ ಬಿಡುಗಡೆಯ ಆರಂಭಿಕ ದಿನಗಳಲ್ಲಿ ನಾಯಕಿ ಜಾನ್ಹವಿ ಕಪೂರ್ ಪಾತ್ರವನ್ನು ಚಿತ್ರಿಸಿರುವ ರೀತಿಗೆ ಕೆಲ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಜಾನ್ಹವಿ ಕಪೂರ್ ನಟಿಸಿದ್ದ ಕೆಲವು ದೃಶ್ಯಗಳನ್ನು ತೆಗೆದುಹಾಕಿ ಮರು ಸೆನ್ಸಾರ್ ಮಾಡಿಸಿ ಚಿತ್ರವನ್ನು ಮರುಬಿಡುಗಡೆ ಮಾಡಿದ್ದರು. ಒಟಿಟಿಯಲ್ಲೂ ಪರಿಷ್ಕೃತ ಆವೃತ್ತಿಯನ್ನೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ಸಂಗೀತ ನಿರ್ದೇಶನವನ್ನು ಎ.ಆರ್. ರೆಹಮಾನ್ ನಿರ್ವಹಿಸಿದ್ದಾರೆ.
—





Be the first to comment