ಹುಲಿಬೀರ

‘ಹುಲಿಬೀರ’ ಚಿತ್ರದ ‘ಜಿಗ್ರಿದೋಸ್ತ್’ ಹಾಡು ಬಿಡುಗಡೆ

ಯುವಕರನ್ನು ಹಳ್ಳಿಗಳಿಗೆ ಮರಳಿಸಿದ ಧೀರ ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ ಹುಲಿಬೀರ. ಮದರಂಗಿ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ‘ಜಿಗ್ರಿ ದೋಸ್ತ್’ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಯರ್ರಾಬಿರ್ರಿ ಖ್ಯಾತಿಯ ನಟ ಅಂಜನ್ ಚಿತ್ರದ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಜಿಗ್ರಿ ದೋಸ್ತ ಹಾಡಿಗೆ ಮಾಳು, ಶಿವಾನಿ ದನಿಯಾಗಿದ್ದಾರೆ.

ಉತ್ತರ ಕರ್ನಾಟಕದ ನೇಟಿವಿಟಿ, ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ, ಹೀಗೆ ಅಲ್ಲಿನವರೇ ಸೇರಿ ಮಾಡಿರುವ ಅದೇ ಸೊಗಡಿನ ಚಿತ್ರಕ್ಕೆ ವೀರಸಮರ್ಥ ಅವರ ಸಂಗೀತ, ಸನಾತನ ಅವರ ಕ್ಯಾಮೆರಾ ವರ್ಕ್ ಇದೆ. ಹಿರಿಯನಟ ರಂಗಾಯಣ ರಘು ಗ್ರಾಮದ ಹಿರಿಯನ ಪಾತ್ರ ಮಾಡಿದ್ದಾರೆ.

ಈ ವೇಳೆ ಆಡಿಯೋ ಹಕ್ಕು ಪಡೆದಿರುವ ಲಹರಿ ವೇಲು ಮಾತನಾಡಿ ನಮಗೆ ಉತ್ತರ ಕರ್ನಾಟಕದ ಜತೆ ಹಳೇ ನಂಟಿದೆ. ಚಿತ್ರದ 5 ಹಾಡುಗಳೂ ಅದ್ಭುತವಾಗಿ ಮೂಡಿಬಂದಿದೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಗುರುರಾಜ್, ಆದಿತ್ಯ ಶಶಿಕುಮಾರ್, ವಿಕ್ರಂ ಶ್ರೀಧರ್ ಚಿತ್ರಕ್ಜೆ ಶುಭ ಹಾರೈಸಿದರು. ಸಂಗೀತ ನಿರ್ದೇಶಕ ವೀರ ಸಮರ್ಥ್ ಮಾತನಾಡಿ ಚಿತ್ರದಲ್ಲಿ ಜಾನಪದ ಶೈಲಿಯ, ಮಣ್ಣಿನ ಸೊಗಡಿನ ನಾಲ್ಕು ಹಾಡು ಹಾಗೂ 2 ಬಿಟ್ ಗಳಿವೆ, ನಿರ್ದೇಶಕರು, ಶಿವು ಬೆರ್ಗಿ, ನಾಗೇಂದ್ರ ಪ್ರಸಾದ್ ಲಿರಿಕ್ ಬರೆದಿದ್ದಾರೆ. ಹುಟ್ಟಿಬಂದೆ ಹುಲಿಬೀರನಾಗಿ ಸಂಗೀತಾ ಕಟ್ಟಿ ಹಾಡಿದ್ದಾರೆ. ಒಂದೂರಲ್ಲಿ ನಡೆಯುವ ಕಥೆ,ಅಂಜನ್ ಪಾತ್ರ ನೋಡಿ ಅತ್ತಿದ್ದೇನೆ ಎಂದರು.

ಹುಲಿಬೀರ

ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ ಈ ಕಾನ್ಸೆಪ್ಟ್ ಐದಾರು ವರ್ಷಗಳ‌ ಹಿಂದೆಯೇ ಹುಟ್ಟಿದ್ದು. ಜುಲೈ 24ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಉದ್ದೇಶವಿದೆ. ಹಳ್ಳಿಯ ಮುಗ್ದ ಹುಡುಗನ ಕಥೆ. ನನ್ನ ಊರಲ್ಲಿ ನೋಡಿದ್ದು, ನಮ್ಮೆಲ್ಲರ ಜೀವನದಲ್ಲಿ ನಡೆವಂಥ ಘಟನೆಗಳೇ ಈ ಚಿತ್ರ. ಹಳ್ಳಿಯ ಹುಡುಗನೊಬ್ಬ ತನ್ನೂರನ್ನು ಉದ್ದಾರ ಮಾಡುವ ಕಥೆಯಿದು ಎಂದರು.

ನಿರ್ಮಾಪಕ ದಾವಲ್ ಸಾಹೇಬ ಹುಣಶೀಮರದ ಮಾತನಾಡಿ ನಮ್ಮ ಚಿತ್ರವೀಗ ರಿಲೀಸ್ ಹಂತಕ್ಕೆ ಬಂದಿದೆ. ವೇಲು ಅವರು ನಮಗೆ ತುಂಬಾ ಸಪೋರ್ಟ್ ಮಾಡಿದರು. ನಮ್ಮ ಚಿತ್ರ ಗೆದ್ದಷ್ಟೇ ಖುಷಿಯಾಗಿದೆ. ಉತ್ತರ ಕರ್ನಾಟಕದ ಸೊಗಡನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು. ಮತ್ತೊಬ್ಬ ನಿರ್ಮಾಪಕ ಅಶೋಕ್ (ತುರುವೇಕೆರೆ) ಮಾತನಾಡಿ ಸಿನಿಮಾ ಈ ಮಟ್ಟಕ್ಕೆ ಬರಲು ಗಿರೀಶ್ ಕಾರಣ. ನಾನು ಉತ್ತರ ಕರ್ನಾಟಕದವನಲ್ಲ, ದಾವಲ್ ಸಾಹೇಬರು ಈ ಕಥೆ ಹೇಳಿ ಸಾಥ್ ಕೊಡಿ ಅಂದರು. ಇವತ್ತು ಹಾಡುಗಳನ್ನು ನಿಮ್ನ ಮುಂದೆ ಇಟ್ಟಿದ್ದೇವೆ‌ ಎಂದರು.

ಸುಜಾತ ಗಿರೀಶ್ ಮಾತನಾಡಿ ನಾವು ಉತ್ತರ ಕರ್ನಾಟಕದವರು, ಎಲ್ಲರೂ ನಮ್ಮಕಡೆ ಬರಬೇಕು. ಅಲ್ಲಿನ ಸೊಗಡನ್ನು ಸವಿಯಬೇಕು. ನಮ್ಮ ಚಿತ್ರ ಎಲ್ಲಾ ಭಾಷೆಗಳಲ್ಲಿ ಆಗಬೇಕು ಎಂಬಾಸೆ ಇದೆ ಎಂದರು.

ಹುಲಿಬೀರ

ಗಿರೀಶ್ ಮಾತನಾಡಿ ನಮ್ಮ ಪತ್ನಿಗೆ ಸಿನಿಮಾ ಅಂದ್ರೆ ಬಹಳ ಪ್ರೀತಿ. ನೀನೇ ಮಾಡು ಅಂತ ಬೆನ್ನೆಲುಬಾಗಿ ನಿಂತೆ. ಸಂಗೀತಾ ಕಟ್ಟಿ ಅವರು ಅದ್ಭುತವಾದ ಹಾಡನ್ನು ಕೊಟ್ಟಿದ್ದಾರೆ ಎಂದರು.

ನಾಯಕ ಅಂಜನ್ ಮಾತನಾಡಿ ನಾನು ಕುಂದಗೋಳದವನು. ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ‌ ಮುಂದೆನಿಂತು ಬಗೆಹರಿಸುತ್ತಾನೆ. ಆತನನ್ನು ಹಳ್ಳಿಯ ಜನರೆಲ್ಲ ಹುಲಿಬೀರ ಅಂತಿರ್ತಾರೆ. ಪ್ರತಿ ಮನೆಯಲ್ಲಿ ಇಂಥ ಒಬ್ಬ ಹುಡುಗನಿರ್ತಾನೆ. ಲಾಸ್ಟ್ ಆಪ್ಷನ್ ನಲ್ಲಿರೋ ಆ ಹುಡುಗ ಇಡೀ ಊರನ್ನೇ ಹೇಗೆ ಉದ್ದಾರ ಮಾಡ್ತಾನೆ ಅನ್ನೋದೇ ನನ್ನ ಪಾತ್ರ. ಹುಟ್ಟಿಬಂದೆ ಹುಲಿಬೀರ ಸಾಂಗ್ ನನಗೇ ಬರೆದ ಹಾಗಿತ್ತು.

ಒಂದಷ್ಟು ಜನರಿಗೆ ಸಿನಿಮಾ ತೋರಿಸಿದಾಗ ಕ್ಲೈಮ್ಯಾಕ್ಸ್ ನೋಡುವಾಗ ಎಲ್ಲರ ಕಣ್ಣಲ್ಲೂ ನೀರುಬಂತು. ನನ್ನ ತಾಯಿ ಪಾತ್ರವನ್ನು ಸುನಂದಮ್ಮ ಮಾಡಿದ್ದಾರೆ. ಮಲ್ಲು ಬಾಗಲಕೋಟೆ, ಮಾವನ‌ ಪಾತ್ರ ಮಾಡಿದ್ದಾರೆ ಎಂದರು.

ನಟಿ ವನು ಪಾಟೀಲ್ ಮಾತನಾಡಿ ನಾನು ಯುಟ್ಯೂಬ್ ಮಾಡಿಕೊಂಡು ಬಂದಾಕಿ. ನನ್ನ ಮೊದಲ ಚಿತ್ರವಿದು‌ ಭಾಳ ಸ್ಪೆಷಲ್ ಕೂಡ. ‌ಹಠಮಾರಿ ಹೆಣ್ಣಾಗಿ ರಗಡ್ ಪಾತ್ರ ಮಾಡಿದ್ದೇನೆ ಎಂದರು.

ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ.

ವಿದ್ಯಾವಂತ ಯುವಕ, ಯುವತಿಯರೆಲ್ಲ ಕೆಲಸ ಅಂತ ಸಿಟಿಗೆ ಹೋದರೆ ಆ ಹಳ್ಳಿಗಳನ್ನು ಬೆಳೆಸೋರು ಯಾರು, ಈ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ. ಅವರೆಲ್ಲ ಮತ್ತೆ ಹೇಗೆ ಹಳ್ಳಿಗೆ ಮರಳುವಂತೆ ಮಾಡಿ, ಹಳ್ಳಿಯನ್ನು ಉದ್ದರಿಸುತ್ತಾನೆ, ಹುಲಿಬೀರ ಎನಿಸಿಕೊಳ್ಳುತ್ತಾನೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಧರ್ಮ ವಿಶ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!