ಜೂನಿಯರ್ ಎನ್ ಟಿಆರ್ ಕೆಂಡಾಮಂಡಲ

ಜೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್ ಅಭಿನಯದ ‘ದೇವರ’ ಚಿತ್ರದ ಜನಪ್ರಿಯ ‘ಚುಟ್ಟಮಲ್ಲೆ’ ಹಾಡಿನ ದೃಶ್ಯಗಳನ್ನು ಕೃತಕ ಬುದ್ಧಿಮತ್ತೆ ಮೂಲಕ ಮಾರ್ಫ್ ಮಾಡಿ ಅಶ್ಲೀಲ ರೀತಿಯಲ್ಲಿ ಸೃಷ್ಟಿಸಿರುವ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ನಟ ಜೂನಿಯರ್ ಎನ್‌ಟಿಆರ್ ಕೆಂಡಾಮಂಡಲರಾಗಿದ್ದಾರೆ.

‘ದೇವರ’ ಚಿತ್ರದ ಮೂಲ ಹಾಡಿನ ದೃಶ್ಯಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ತಿರುಚಿ  ಲೈಂಗಿಕ ದೃಶ್ಯಗಳಂತೆ ಬಿಂಬಿಸಲಾಗಿದೆ ಎಂದು ವರದಿಯಾಗಿದೆ. ಈ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣ  ಪ್ರತಿಕ್ರಿಯಿಸಿರುವ ಜೂನಿಯರ್ ಎನ್‌ಟಿಆರ್, ಇಂತಹ ವಿಡಿಯೋಗಳನ್ನು ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

“ಮಹಿಳೆಯರನ್ನು ತಾಯಿ ಮತ್ತು ದೇವತೆಯ ರೂಪದಲ್ಲಿ ಗೌರವಿಸುವ ದೇಶದಲ್ಲಿ, ಕೃತಕ ಬುದ್ಧಿಮತ್ತೆ ಬಳಸಿ ಮಹಿಳೆಯನ್ನು ಅತ್ಯಂತ ಅವಹೇಳನಕಾರಿ ರೀತಿಯಲ್ಲಿ ತೋರಿಸುವ ಮಟ್ಟಕ್ಕೆ ಕೆಲವರು ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಮಾರ್ಫ್ಡ್ ‘ಚುಟ್ಟಮಲ್ಲೆ’ ವಿಡಿಯೋವನ್ನು ಸೃಷ್ಟಿಸಿದವರು ಹಾಗೂ ಅದನ್ನು ಹರಡುತ್ತಿರುವವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಈ ವಿಡಿಯೋವನ್ನು ಸೃಷ್ಟಿಸಿದವರನ್ನಾಗಲಿ, ಹರಡುತ್ತಿರುವವರನ್ನಾಗಲಿ ನಾನು ಬಿಡುವುದಿಲ್ಲ. ಸಾಧ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ. ಇಂತಹ ವಿಷಯಗಳನ್ನು ದಯವಿಟ್ಟು ನೋಡಬೇಡಿ. ಹಂಚಿಕೊಳ್ಳಬೇಡಿ ಅಥವಾ ಅದರೊಂದಿಗೆ ತೊಡಗಿಸಿಕೊಳ್ಳಬೇಡಿ” ಎಂದು  ಜೂನಿಯರ್ ಎನ್ ಟಿಆರ್   ಮನವಿ ಮಾಡಿದ್ದಾರೆ.

‘ದೇವರ’ ಚಿತ್ರದ ‘ಚುಟ್ಟಮಲ್ಲ’ ಹಾಡು ಜಾನ್ವಿ ಕಪೂರ್ ಮತ್ತು ಜೂನಿಯರ್ ಎನ್ ಟಿಆರ್  ಅಭಿನಯದ ಪ್ರಮುಖ ರೊಮ್ಯಾಂಟಿಕ್ ಹಾಡಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದು, ಶಿಲ್ಪಾ ರಾವ್ ಧ್ವನಿ ನೀಡಿದ್ದಾರೆ. ಬಾಸ್ಕೋ ಮಾರ್ಟಿಸ್ ನೃತ್ಯ ಸಂಯೋಜನೆ ಮಾಡಿದ್ದಾರೆ.

—

Be the first to comment

Leave a Reply

Your email address will not be published. Required fields are marked *

Translate »
error: Content is protected !!