ಭಾರತದಿಂದ ಆಸ್ಕರ್‌ಗೆ ಅಧಿಕೃತವಾಗಿ ಆಯ್ಕೆಯಾಗಿರುವ ಮರಾಠಿ ಸಿನಿಮಾ ‘ಗೋಂಧಳ್’ ಅಕ್ಟೋಬರ್ 9ರಿಂದ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಸಂತೋಷ್ ದವಾಖರ್ ನಿರ್ದೇಶನದ ಮನೋವೈಜ್ಞಾನಿಕ ಥ್ರಿಲ್ಲರ್ ‘ಗೋಂಧಳ್’ ವಿಶೇಷ ಪ್ರದರ್ಶನಗಳು ಬೆಂಗಳೂರು ಸೇರಿದಂತೆ ದೇಶದ 6 ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದೆ. ಗ್ರಾಮೀಣ ಭಾರತದ ಆಚರಣೆಗಳು, ಜನಜೀವನ ಹಾಗೂ ಮಾನವ ಭಾವನೆಗಳನ್ನು ಕಥೆಯ ಪ್ರಮುಖ ಭಾಗವಾಗಿಸಿಕೊಂಡಿರುವ ಈ ಸಿನಿಮಾಬೆಂಗಳೂರು, ಮುಂಬೈ, ಪುಣೆ, ದೆಹಲಿ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ವಿಶೇಷ ಪ್ರದರ್ಶನ ಕಾಣಲಿದೆ.
‘ಗೋಂಧಳ್’ ಮರಾಠಿ ಭಾಷೆಯ ಮೂಲ ಆವೃತ್ತಿಯ ಜೊತೆಗೆ ಹಿಂದಿ ಭಾಷೆಯಲ್ಲೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 9ರಿಂದ ಆರಂಭವಾಗಲಿರುವ ವಿಶೇಷ ಪ್ರದರ್ಶನಗಳು ಮಲ್ಟಿಪ್ಲೆಕ್ಸ್‌ಗಳಿಗೆ ಸೀಮಿತವಾಗಿರಲಿವೆ.
‘ಗೋಂಧಳ್’ ಸಿನಿಮಾ ಮಹಾರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಗೊಂಧಳ್ ಜನಪದ ಆಚರಣೆಯ ಹಿನ್ನೆಲೆಯನ್ನು ಆಧರಿಸಿದೆ. ರಾತ್ರಿ ಪೂರ್ತಿ ನಡೆಯುವ ಈ ಆಚರಣೆಯಲ್ಲಿ ಭಕ್ತಿಗೀತೆ, ಸಂಗೀತ ಮತ್ತು ನೃತ್ಯ ಪ್ರಮುಖ ಭಾಗಗಳಾಗಿವೆ. ಸಾಂಸ್ಕೃತಿಕ ಹಿನ್ನೆಲೆಯನ್ನು ರೋಮಾಂಚಕ ಮನೋವೈಜ್ಞಾನಿಕ ಥ್ರಿಲ್ಲರ್ ಕಥೆಯೊಂದಿಗೆ ಬೆಸೆದು ನಿರ್ದೇಶಕರು ಸಂಪ್ರದಾಯ, ಮಾನವ ಭಾವನೆಗಳು ಮತ್ತು ಗುಪ್ತ ಉದ್ವಿಗ್ನತೆಗಳ ಸಂಘರ್ಷವನ್ನು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ.
ಚಿತ್ರದಲ್ಲಿ ಇಶಿತಾ ದೇಶಮುಖ್, ಕಿಶೋರ್ ಕದಮ್ ಮತ್ತು ಯೋಗೇಶ್ ಸೋಹನಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗೋಂಧಳ್’ ಈಗಾಗಲೇ ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನಕ್ಕಾಗಿ ಸಂತೋಷ್ ದವಾಖರ್ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ ಪಡೆದಿದ್ದಾರೆ.
—–





Be the first to comment