‘ಬಾಸ್’ ಸಿನಿಮಾ ಬಿಡುಗಡೆಗೆ ತಡೆ ಕೋರಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.
ನಟ ದರ್ಶನ್ ಅವರ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿ ಸಿನಿಮಾ ನಿರ್ಮಿಸಲಾಗಿದೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯ ಸೆನ್ಸಾರ್ ಮಂಡಳಿಯ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚಿತ್ರತಂಡಕ್ಕೆ ನಿರ್ದೇಶನ ನೀಡಿದೆ.
ಚಿತ್ರದ ಆರಂಭದಲ್ಲೇ ‘ಇದು ಕಾಲ್ಪನಿಕ ಚಲನಚಿತ್ರ. ಯಾವುದೇ ವ್ಯಕ್ತಿಯ ಜೀವನವನ್ನು ಆಧರಿಸಿಲ್ಲ’ ಎಂಬ ಸ್ಪಷ್ಟ ಪ್ರಕಟಣೆಯನ್ನು ಪ್ರದರ್ಶಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಈ ಹಿಂದೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣಪತ್ರ ನೀಡಿದ್ದರೂ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ಸೆನ್ಸಾರ್ ಮಂಡಳಿಯ ನಿರ್ದೇಶನಗಳನ್ನು ಪಾಲಿಸಿ ಸಿನಿಮಾ ಬಿಡುಗಡೆ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.
ಕಾನೂನು ಹೋರಾಟದ ಬಳಿಕ ‘ಬಾಸ್’ ಸಿನಿಮಾ ಬಿಡುಗಡೆಯಾಗಲು ದಾರಿ ಸುಗಮವಾಗಿದೆ. ಇದೀಗ ‘ಬಾಸ್’ ಚಿತ್ರತಂಡ ಚಿತ್ರ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿದೆ. ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ಮತ್ತು ನಿರ್ದೇಶಕ ಲವಾ ವಿ., ಇಂದೇ ಸಂಜೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್‌ನಲ್ಲಿ ರೇಣುಕಾಸ್ವಾಮಿ ಪ್ರಕರಣವನ್ನು ನೆನಪಿಸುವ ಹಲವು ದೃಶ್ಯಗಳಿದ್ದವು. ಇದೇ ಕಾರಣದಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.





Be the first to comment