ಗ್ರಾಮಾಯಣ

ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ ಅವರಿಂದ ‘ಗ್ರಾಮಾಯಣ’ ಟ್ರೇಲರ್ ಅನಾವರಣ

ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ರಚನೆ – ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ – ಮೇಘ ಶೆಟ್ಟಿ ನಾಯಕ – ನಾಯಕಿಯಾಗಿ ಅಭಿನಯಿಸಿರುವ “ಗ್ರಾಮಾಯಣ” ಚಿತ್ರದ‌ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ದುನಿಯಾ ವಿಜಯ್ ಹಾಗೂ ನಟಿ ಅಪರ್ಣ ಅವರ ಪತಿ ನಾಗರಾಜ್ ವಸ್ತಾರೆ ಅವರಿಂದ “ಗ್ರಾಮಾಯಣ”ದ ಟ್ರೇಲರ್ ಅನಾವರಣವಾಯಿತು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ಯವ ರಾಜಕುಮಾರ್, ನಟ ನವೀನ್ ಶಂಕರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, ” ಗ್ರಾಮಾಯಣ”ಕ್ಕೆ ಶುಭ ಕೋರಿದರು.

ನನಗೆ ವಿನಯ್ ರಾಜಕುಮಾರ್ ಎಂದರೆ ಬಹಳ ಇಷ್ಟ ಎಂದು‌ ಟ್ರೇಲರ್ ಬಿಡುಗಡೆ ಮಾತನಾಡಿದ ನಟ ದುನಿಯಾ ವಿಜಯ್, ಟ್ರೇಲರ್ ಅದ್ಭುತವಾಗಿದೆ. ದೇವನೂರು ಚಂದ್ರು ಉತ್ತಮ ನಿರ್ದೇಶಕ.‌ ನಾನು ಅವರನ್ನು ಎರಡನೇ ಸೂರಿ ಅಂತಲೇ ಕರೆಯುತ್ತೇನೆ.‌ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಲಹರಿ ಸಂಸ್ಥೆಗೆ ಹಾಗೂ‌ ಇಡೀ “ಗ್ರಾಮಾಯಣ” ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಅಪರ್ಣ, “ಗ್ರಾಮಾಯಣ” ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದ‌ ಮೇಲೆ ಅಲ್ಲಿನ ವಿಷಯಗಳನ್ನು ನನ್ನ ಬಳಿ ಹಂಚಿಕೊಳ್ಳುತ್ತಿದ್ದರು. ಇಂದು ಅವರಿಲ್ಲದೆ ಅವರ ಅಭಿನಯದ ಚಿತ್ರದ ಟ್ರೇಲರ್ ಅನಾವರಣ ಮಾಡಿದ್ದು, ಬಹಳ ಬೇಸರವಾಗಿದೆ‌. “ಗ್ರಾಮಾಯಣ” ಯಶಸ್ವಿಯಾಗಲಿ ಎಂದು ನಟಿ ಅಪರ್ಣ ಪತಿ ನಾಗರಾಜ್ ವಸ್ತಾರೆ ಹೇಳಿದರು.

ಗ್ರಾಮಾಯಣ

ಈ ಚಿತ್ರದ ಬಗ್ಗೆ ನಾವು ಹೇಳುದಕ್ಕಿಂತ ಅಭಿಮಾನಿಗಳು ಹೇಳಬೇಕು. ಜುಲೈ 3 ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ನಟ ರಾಘವೇಂದ್ರ ರಾಜಕುಮಾರ್. ಅಣ್ಣನ ಚಿತ್ರ ಯಶಸ್ವಿಯಾಗಲೆಂದು ಯುವ ರಾಜಕುಮಾರ್ ಹಾರೈಸಿದರು. ನಿರ್ದೇಶಕ ಸಿಂಪಲ್ ಸುನಿ ಚಿತ್ರದ ಮೊದಲ ಪ್ರದರ್ಶನಕ್ಕೆ ಒಂದು ಆಡಿಯನ್ನೇ ಬುಕ್ ಮಾಡುವುದಾಗಿ ಹೇಳಿದರು. ನಟ ನವೀನ್ ಶಂಕರ್ ಕೂಡ “ಗ್ರಾಮಾಯಣ”ಕ್ಕೆ ಶುಭ ಕೋರಿದರು.

“ಗ್ರಾಮಾಯಣ” ಟ್ರೇಲರ್ ಚೆನ್ನಾಗಿ ಬಂದಿದೆ. ಚಿತ್ರ ಇನ್ನೂ ಚೆನ್ನಾಗಿ ಬಂದಿದೆ. ಇದು ನಮ್ಮ ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಚಿತ್ರ. ವಿನಯ್ ರಾಜಕುಮಾರ್ ಅವರ ಅಭಿನಯದ ಒಂಭತ್ತನೇ ಚಿತ್ರವೂ ಹೌದು. ಒಂಭತ್ತು ನಮ್ಮ ಸಂಸ್ಥೆಗೆ ಅದೃಷ್ಟದ ಸಂಖ್ಯೆ.‌ ಇಂದು ಆಗಮಿಸಿದ ಎಲ್ಲಾ ಅತಿಥಿಗಳಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು. ನಿರ್ಮಾಪಕ ನವೀನ್ ಮನೋಹರ್ ಅವರು ಸಹ ಎಲ್ಲರಿಗೂ ಧನ್ಯವಾದ ಹೇಳೊದರು. ಲಹರಿ ಸಂಸ್ಥೆಯ ಸ್ಥಾಪಕ ಮನೋಹರ್ ನಾಯ್ಡು ಹಾಗೂ ಅವರ ಸಹೋದರ ರಮೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗ್ರಾಮಾಯಣ

ಈ ವೇದಿಕೆ ನೋಡುತ್ತಿದ್ದರೆ, ನನಗೆ ಚಿತ್ರದ ಆರಂಭದ ದಿನಗಳು ನೆನಪಾಗುತ್ತಿದೆ. ನಮ್ಮ ಚಿತ್ರ ಶುರುವಾಗಿ ಇಷ್ಟು ವರ್ಷ ಆಯಿತು ಅಂತ ಎಲ್ಲರೂ ಹೇಳುತ್ತಿದ್ದಾರೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು. ಲಹರಿ ಸಂಸ್ಥೆಯವರು ನಮ್ಮ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅವರಿಗೆ, ನಿರ್ದೇಶಕರಿಗೆ, ಇಡೀ ತಂಡಕ್ಕೆ ಹಾಗೂ ಆಗಮಿಸಿದ ಪ್ರತಿಯೊಬ್ಬ ಗಣ್ಯರಿಗೂ ಧನ್ಯವಾದ ಎಂದು ಮಾತನಾಡಿದ ನಾಯಕ ವಿನಯ್ ರಾಜಕುಮಾರ್, ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಈ ಚಿತ್ರದಲ್ಲಿ ಮಾಡಿರುವುದಾಗಿ ಹೇಳಿದರು.

ಚಿತ್ರದ ಬಗ್ಗೆ ನಾನು ಹೇಳುವುದೇನು ಇಲ್ಲ. ಒಂದಂತೂ ಹೇಳುತ್ತೇನೆ. ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರವಿದು. ಒಂದೊಳ್ಳೆ ಚಿತ್ರ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ,‌ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ಎಂದು ಹೇಳಿದ ನಿರ್ದೇಶಕ ದೇವನೂರು ಚಂದ್ರು ತುಂಬಾ ಭಾವುಕರಾದರು.

ನಟಿ ಮೇಘ ಶೆಟ್ಟಿ ಕೂಡ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಟ ಅರುಣ್ ಸಾಗರ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹಾಗೂ ಗೀತರಚನೆಕಾರ ಪ್ರಮೋದ್ ಮರವಂತೆ ಮುಂತಾದವರು “ಗ್ರಾಮಾಯಣ” ಚಿತ್ರದ ಕುರಿತು ಮಾತನಾಡಿದರು.

ವಿನಯ್ ರಾಜಕುಮಾರ್, ಮೇಘ ಶೆಟ್ಟಿ, ಲೂಸ್ ಮಾದ ಯೋಗೀಶ್, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!