ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ನ ಟ್ರೇಲರ್ ರಿಲೀಸಾಗಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ.
ಯಶ್ ಈ ಮಟ್ಟಕ್ಕೆ ಬೆಳೆದಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ವೈಯಕ್ತಿಕವಾಗಿ ಈ ನನ್ನ ತಮ್ಮನ ಸಾಧನೆ ಕಂಡು ನಾನೇ ಮಾಡಿದಷ್ಟು ಖುಷಿಯಾಗಿದೆ. ಟ್ರೇಲರ್ ಅದ್ಭುತವಾಗಿದೆ. ಟಾಕ್ಸಿಕ್ ನೋಡಲು ನಿಮ್ಮೆಲ್ಲರ ಹಾಗೆ ನಾನು ಕೂಡ ಕಾಯುತ್ತಿದ್ದೇನೆ ಅಂದರು ಶಿವಣ್ಣ.
ಟ್ರೇಲರ್ ನಲ್ಲಿ ಯಶ್ ಮೂರು ಶೇಡ್ ಗಳಲ್ಲಿ ಕಾಣಿಸಿದ್ದಾರೆ. ಅದರಲ್ಲಿ ತಂದೆ ಮಗನ ಪಾತ್ರವೂ ಇದೆ ಎನ್ನುವುದು ಸ್ಪಷ್ಟವಾಗಿದೆ. ಮೂರನೆಯ ಪಾತ್ರ ಏನು ಎನ್ನುವುದು ಕುತೂಹಲ ಮೂಡಿಸಿದೆ.
ರಾಕಿಂಗ್ ಸ್ಟಾರ್ ಯಶ್ ತಮ್ಮ ಮಾತಿನಲ್ಲಿ ಚಿತ್ರದ ಕುರಿತಾದ ಮಾಹಿತಿಗಿಂತ ದಾಟಿ ಬಂದ ಸಂದರ್ಭವನ್ನು ನೆನಪಿಸಿಕೊಂಡಿದ್ದೇ ಹೆಚ್ಚು.
ಟಾಕ್ಸಿಕ್ ಚಿತ್ರ ಆಗಿರುವುದಕ್ಕೆ ಮುಖ್ಯ ಕಾರಣ ಕರ್ನಾಟಕದ ಜನತೆ. ಕರ್ನಾಟಕ ಜನತೆ ನನಗೆ ಕೊಟ್ಟಿರುವ ಶಕ್ತಿ, ಕೊಟ್ಟಿರುವ ಜವಾಬ್ದಾರಿ. ಅವರು ಪ್ರತಿ ಬಾರಿ ನನಗೆ ಶಕ್ತಿ ಕೊಟ್ಟಾಗಲೂ ಸಿನಿಮಾ ಹಿಟ್ ಮಾಡಿದಾಗಲೂ,ನನ್ನ ತಲೆಯಲ್ಲಿ ಒಂದೇ ವಿಷಯ ಓಡ್ತಾ ಇದ್ದಿದ್ದು, ಅದು ನನ್ನ ಸಾಧನೆಯಲ್ಲ ಅಲ್ಲಿ ಹೋಗಿ ಕೆಲಸ ಮಾಡು ಅಂತ ನನ್ನ ಜನ ಕೊಟ್ಟಿರುವ ಜವಾಬ್ದಾರಿ ಅಂತ ನಾನು ನಂಬಿದ್ದೀನಿ ಎಂದಿದ್ದಾರೆ ಯಶ್.

“ಟಾಕ್ಸಿಕ್ ನೀವು ಕೊಟ್ಟ ಹಳೆಯ ಗೆಲುವಿನ ಪ್ರತೀಕ. ಈಗ ಮುಂದಿನ ಹೆಜ್ಜೆ ಇಡ್ತಾ ಇದ್ದೀವಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಪ್ರಯತ್ನ ಮಾಡಿದ್ದೀವಿ. ನಿಮ್ಮ ಅಶೀರ್ವಾದ ಇರಲಿ. ಯಶ್ ಮೇಲೆ ನಂಬಿಕೆ ಇರಲಿ. ದಾರಿ ಯಾವುದಾದರೂ ಆಗಬಹುದು. ಗುರಿ ಮುಟ್ಟಬೇಕು. ಆ ದಾರಿಗಳಲ್ಲಿ ಕೆಲವು ಹೋರಾಟಗಳಿರುತ್ತದೆ, ಹೋರಾಡಿಕೊಂಡು ಮುನ್ನುಗ್ಗಬೇಕು. ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು. ಇವತ್ತಿನ ಮನಸ್ಸುಗಳು, ಇವತ್ತಿನ ಯುವ ಪೀಳಿಗೆ ಇವತ್ತಿನ ಗೊಂದಲಗಳೇನಿದೆ? ಆ ಎಲ್ಲಾ ಗೊಂದಲಗಳಿಗೆ ಅವರ್ ರೆಪ್ರೆಸೆಂಟೇಶನ್ ಈ ಸಿನಿಮಾದಲ್ಲಿರುತ್ತದೆ. ತುಂಬಾ ಡೀಪ್, ತುಂಬ ಅದ್ಭುತವಾದ, ಮನುಷ್ಯರಿಗೆ ಬೇಕಾದ ವಿಷಯ ಇರುವಂತಹ ಒಂದು ಚಿತ್ರ ಆಗುತ್ತದೆ. ಕನ್ನಡಿಗರು ಹೆಮ್ಮೆಯಿಂದ ಹೇಳಬಹುದು. ಯಾವತ್ತೂ ನಾವು ತಲೆತಗ್ಗಿಸೋಕೆ ಬಿಡಲ್ಲ, ತಲೆ ಎತ್ತಿಕೊಂಡು ಓಡಾಡುವಂತೆ ಇರುತ್ತದೆ. ಹೆಮ್ಮೆಯಿಂದ ನೋಡಿ ಎಂದಿದ್ದಾರೆ ಯಶ್.
ಸಮಾರಂಭದಲ್ಲಿ ನಿರ್ಮಾಪಕ ಕೆವಿಎನ್ ನ ವೆಂಕಟ್, ಕಲಾವಿದರಾದ ಬಾಲಾಜಿ ಮನೋಹರ್, ಸುದೇವ್ ನಾಯರ್, ಅಕ್ಷಯ್ ಒಬೆರಾಯ್ ಸೇರಿದಂತೆ ನಯನ್ ತಾರ, ತಾರಾ ಸುತಾರಿಯಾ, ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಭಾರತೀಯ ಸ್ಟಾರ್ ನಟಿಯರ ದಂಡೇ ನೆರೆದಿದೆ. ಪ್ರತಿಯೊಬ್ಬರು ಕೂಡ ಯಶ್ ಅವರನ್ನು ಮೆಚ್ಚಿ ಮಾತನಾಡಿದ್ದಾರೆ. ಅದರಲ್ಲೂ ನಯನ್ ತಾರ ತಾವು ನಟಿಸಿದ ಸೂಪರ್ ಸ್ಟಾರ್ ಗಳಲ್ಲಿ ಯಶ್ ಗೆ ವಿಶೇಷ ಸ್ಥಾನ ಎಂದಿದ್ದಾರೆ. ಚಿತ್ರಕ್ಕಾಗಿ ಅವರು 4 ವರ್ಷ ಮೀಸಲಿಟ್ಟ ಸಮರ್ಪಣಾ ಭಾವ, ಪರಿಶ್ರಮವನ್ನು ಮೆಚ್ಚಿದ್ದಾರೆ.

ಭಾವುಕಗೊಂಡ ನಿರ್ದೇಶಕಿ ಗೀತು:
ಟ್ಯಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ ದಾಸ್ ಮೊದಲ ಬಾರಿಗೆ ಇಷ್ಟು ದೊಡ್ಡ ಬಜೆಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿಯೇ ದೊಡ್ಡ ಸಾಹಸ ಮಾಡಿದ ಅನುಭವ ಅವರದಾಗಿತ್ತು.
ನಿರ್ಮಾಪಕ ವೆಂಕಟ್ ಅವರಿಗೆ ನಮ್ಮ ಸಿನಿಮಾದ ಸಂಭಾಷಣೆಗಳೆಲ್ಲ ಕಂಠಪಾಠವಾಗಿದೆ. ಅವರು ನಿರ್ಮಾಣಕ್ಕೆ ಮುಂದೆ ಬಂದಿರುವುದಕ್ಕೆ ವಂದನೆಗಳು. ನಯನ್ ತಾರ ಎಲ್ಲವನ್ನೂ ಹೇಳಿದ್ದಾರೆ. ಯಶ್ ಅವರು ನನ್ನ ಪಾಲಿಗೆ ಒಬ್ಬ ಉತ್ತಮ ನಿರ್ಮಾಪಕ ಮಾತ್ರವಲ್ಲ. ಬುದ್ಧಿವಂತ ನಟ, ಸಹ ಬರಹಗಾರ, ಯಶ್ ಅಂದರೆ ಆಳವಾದ ಭಾವನೆಗಳು ಎಂದ ಗೀತು, ನೀವು ನನ್ನ ಜೀವನದಲ್ಲಿ ಸದಾ ಸ್ಫೂರ್ತಿಯಾಗಿ ಇರುತ್ತೀರಿ ಎಂದರು. ಕೊನೆಯಲ್ಲಿ ಒಂದಷ್ಟು ಮಾತುಗಳನ್ನು ಬರೆದಿಟ್ಟುಕೊಂಡು ಕನ್ನಡದಲ್ಲಿಯೇ ಓದಿ ಹೇಳಿದರು. ” ಈ ಸಿನಿಮಾ ಒಂದೇ ತರಹದ ನಂಬಿಕೆ ಮತ್ತು ಯೋಚನೆಗಳನ್ನು ಹಂಚಿಕೊಂಡು ಮಾಡಿದ ಒಂದು ಪ್ರಯಾಣ. ಈ ನನ್ನ ಕನಸನ್ನು ಹೆಗಲ ಮೇಲೆ ಹೊತ್ತು ನಿಂತವರು ಯಶ್. ಎಲ್ಲರೂ ನನ್ನ ಅನುಮಾನದಲ್ಲಿ ನೋಡುತ್ತಿದ್ದಾಗ ನನ್ನ ನಂಬಿ ಅವಕಾಶ ಕೊಟ್ಟಿದ್ದಕ್ಕಾಗಿ ಅವರಿಗೆ ಹೃದಯ ಪೂರ್ವಕ ಧನ್ಯವಾದ ತಿಳಿಸುತ್ತೇನೆ. ನನ್ನ ಮೇಲೆ ನೀವೆಲ್ಲ ಇಟ್ಟ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ಎಂದಿದ್ದಾರೆ.





Be the first to comment