‘ಬಿಗ್ಬಾಸ್ ಕನ್ನಡ ಸೀಸನ್ 12’ರ ವಿಜೇತ ಗಿಲ್ಲಿ ನಟ ತಮ್ಮ ಮೊದಲ ಸಿನಿಮಾಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಜೂನ್ 21ರಂದು ಗಿಲ್ಲಿ ನಟನ ಹುಟ್ಟುಹಬ್ಬದ ದಿನವೇ ಚಿತ್ರದ ಮುಹೂರ್ತ ನೆರವೇರಲಿದೆ.
ಬಿಗ್ಬಾಸ್ ಗೆಲುವಿನ ನಂತರ ಗಿಲ್ಲಿಯ ಜನಪ್ರಿಯತೆ ಹೆಚ್ಚಾಯಿತು. ಅವರು ಭೇಟಿ ನೀಡಿದ ಎಲ್ಲೆಡೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರು ಅವರನ್ನು ಸಂಪರ್ಕಿಸಲು ಮುಂದಾದರು. ಸೂಕ್ತ ಕಥೆ ಮತ್ತು ಪಾತ್ರಕ್ಕಾಗಿ ಕಾಯುತ್ತಿದ್ದ ಗಿಲ್ಲಿ, ಕೊನೆಗೆ ಕಾಮಿಡಿ ಪ್ರಧಾನ ಕಥೆಯೊಂದರ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಲು ಒಪ್ಪಿಗೆ ನೀಡಿದ್ದಾರೆ.
ಚಿತ್ರವನ್ನು ಚಂದ್ರ ಮೋಹನ್ ನಿರ್ದೇಶನ ಮಾಡಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ನ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಹಾಗೂ ಹರೀಶ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಂಸ್ಥಾಪಕ ಕೆ. ವೆಂಕಟ ನಾರಾಯಣ ಹಾಗೂ ಸಂಸ್ಥೆಯ ಬಿಸಿನೆಸ್ ಹೆಡ್ ಸುಪ್ರಿತ್ ಅವರ ಬೆಂಬಲ ಸಿನಿಮಾಕ್ಕೆ ಸಿಕ್ಕಿದೆ.
ಗಿಲ್ಲಿ ಸಂಭಾವನೆ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಕನ್ನಡ ಚಿತ್ರರಂಗದಲ್ಲಿ ಮೊದಲ ಸಿನಿಮಾಕ್ಕೆ ಇಷ್ಟೊಂದು ಸಂಭಾವನೆ ಪಡೆಯುವುದು ಚರ್ಚೆಗೆ ಗ್ರಾಸವಾಗಿದೆ.
——





Be the first to comment