ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಜೈಲು ಜೀವನಕ್ಕೆ ಸಂಬಂಧಿಸಿದ ಹಲವು ವಿವರಗಳು ಬಹಿರಂಗವಾಗಿವೆ.
ಸುಪ್ರೀಂಕೋರ್ಟ್‌ಗೆ ದರ್ಶನ್ ಜಾಮೀನು ಅರ್ಜಿಯಲ್ಲಿ ಜೈಲಿನ ಅವ್ಯವಸ್ಥೆ, ಕುಟುಂಬದವರ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ, ಭದ್ರತಾ ಆತಂಕಗಳಿವೆ ಎಂದು ಉಲ್ಲೇಖಿಸಿದ್ದರು. ದರ್ಶನ್ ಪರ ವಕೀಲರು ಜೈಲಿನ ಪರಿಸ್ಥಿತಿಯನ್ನು ಆಧಾರವನ್ನಾಗಿ ಮಾಡಿಕೊಂಡು ಜಾಮೀನು ಕೋರಿದ್ದರೂ ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ಜೈಲು ಅಧಿಕಾರಿಗಳು ದರ್ಶನ್ ಅವರ ಜೈಲು ಡೈರಿಯ ವಿವರಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ.
ಜೈಲು ದಾಖಲೆಗಳ ಪ್ರಕಾರ ದರ್ಶನ್ ಈಗಾಗಲೇ 70ಕ್ಕೂ ಹೆಚ್ಚು ಬಾರಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದಾರೆ. 28 ಬಾರಿ ವಕೀಲರನ್ನು ಭೇಟಿ ಮಾಡಿದ್ದಾರೆ. ಜೈಲಿನಿಂದ 73 ಬಾರಿ ಫೋನ್ ಕರೆಗಳನ್ನು ಮಾಡಿದ್ದಾರೆ.
ದರ್ಶನ್ ಅವರಿಗೆ ಇತರೆ ಕೈದಿಗಳಿಗಿಂತ ಹೆಚ್ಚುವರಿ ಸೌಲಭ್ಯಗಳನ್ನೂ ನೀಡಲಾಗಿದೆ. ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಬೆಡ್‌ಶೀಟ್, ಬಾಚಣಿಗೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ. ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರದ ಜೊತೆಗೆ ಹಾಲು ಮತ್ತು ಮೊಟ್ಟೆಯನ್ನೂ ನೀಡಲಾಗುತ್ತಿದೆ. ಸಂದರ್ಶಕರು ತರುವ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಸ್ವೀಕರಿಸಲು ಅವಕಾಶ ನೀಡಲಾಗಿದೆ.
ಭದ್ರತೆ ವಿಚಾರದಲ್ಲಿ ಹಗಲು ವೇಳೆ ಒಬ್ಬ ಸಹಾಯಕ ಜೈಲರ್ ಹಾಗೂ ವಾರ್ಡನ್, ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್‌ಗಳನ್ನು ನಿಯೋಜಿಸಲಾಗಿದೆ. ಇತರ ಕೈದಿಗಳು ಕಾರಿಡಾರ್‌ಗೆ ಬಾರದಂತೆ ವ್ಯವಸ್ಥೆ ಮಾಡಲಾಗಿದೆ., ಬ್ಯಾರಕ್ ಮುಂಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
—-





Be the first to comment