ಶೀರ್ಷಿಕೆಯಿಂದ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಡಿಸೆಂಬರ್ 4ರಂದು ತೆರೆಗೆ ಬರಲಿದೆ.
ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರ ಯಾವುದೇ ಪೌರಾಣಿಕ ಅಥವಾ ಭಕ್ತಿ ಪ್ರಧಾನ ಸಿನಿಮಾವಲ್ಲ.ಇಂದಿನ ಸಮಾಜದ ಮೌಲ್ಯಗಳನ್ನು ಕಟ್ಟಿಕೊಡುವ ಒಂದು ವಿಭಿನ್ನ ಸೋಷಿಯಲ್ ಡ್ರಾಮಾ ಎಂದು ನಿರ್ದೇಶಕ ನಾಗರಾಜ್ ಸೋಮಾಯಾಜಿ ಸ್ಪಷ್ಟಪಡಿಸಿದ್ದಾರೆ.
”ಶೀರ್ಷಿಕೆ ಕೇಳಿದ ತಕ್ಷಣ ಎಲ್ಲರೂ ಇದೊಂದು ದೇವರ ಸಿನಿಮಾ ಎಂದು ಭಾವಿಸಿದ್ದರು. ಆದರೆ ಇದು ಪಕ್ಕಾ ಸೋಷಿಯಲ್ ಡ್ರಾಮಾ. ಕುಂದಾಪುರ ಸೇರಿದಂತೆ ಕರಾವಳಿ ಭಾಗದಲ್ಲಿ ‘ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗ ಮತ್ತು ಬಯಲಾಟ ಅತ್ಯಂತ ಪ್ರಸಿದ್ಧ. ಚಿತ್ರದ ಕಥೆ ಹಾಗೂ ಆ ಪ್ರಸಂಗಕ್ಕೂ ನೇರ ನಂಟಿರುವುದರಿಂದ, ಚಿತ್ರದಲ್ಲಿ ಅದರ ಕೆಲವು ತುಣುಕುಗಳು ಇರುವುದರಿಂದ ಈ ಶೀರ್ಷಿಕೆಯನ್ನು ಇಡಲಾಗಿದೆ. ಪ್ರೇಕ್ಷಕರಿಗೆ ಕಥೆ ಸಾಗುತ್ತಾ ಇದು ಯಾಕೆ ‘ದೇವಿ ಮಹಾತ್ಮೆ’ ಎಂಬುದು ಆಪ್ತವಾಗಿ ಕನೆಕ್ಟ್ ಆಗುತ್ತದೆ” ಎಂದಿದ್ದಾರೆ.
“ರಂಗಾಯಣ ರಘು ಅವರು ಈ ಚಿತ್ರದಲ್ಲಿ ಯಾವುದೇ ಅಬ್ಬರ, ಆಕ್ರೋಶವಿಲ್ಲದ ಅಭಿನಯ ನೀಡಿದ್ದಾರೆ. ಮನುಷ್ಯ ಮನುಷ್ಯನಿಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಅವರ ಪಾತ್ರದ ಪ್ರತಿ ಫ್ರೇಮ್‌ನಲ್ಲೂ ಅದ್ಭುತವಾಗಿ ತೆರೆದಿಟ್ಟಿದ್ದಾರೆ. ಚಿತ್ರದಲ್ಲಿ ಬಹುತೇಕ ರಂಗಭೂಮಿ ಪ್ರತಿಭೆಗಳೇ ನಟಿಸಿದ್ದು, ಪ್ರಶಾಂತ್ ಹಿರೇಮಠ್ ಮೈಸೂರು, ಪಿ.ಡಿ. ಸತೀಶ್, ಅರವಿಂದ್ ಕುಪ್ಳೀಕರ್, ಬಾಸುಮ ಕೊಡಗು, ರಘು ಪಾಂಡೇಶ್ವರ್, ಶ್ವೇತಾ ಶ್ರೀನಿವಾಸ್, ಮೋಹನ್ ಶಣೈ, ಆಸೀಫ್ ಕ್ಷತ್ರೀಯಾ ಹಾಗೂ ಪ್ರತಿಮಾ ನಾಯ್ಕ್ ಸೇರಿದಂತೆ ಹಲವು ಕಲಾವಿದರು ಚಿತ್ರದ ಗಟ್ಟಿತನವನ್ನು ಹೆಚ್ಚಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಫ್ಲ್ಯಾಶ್‌ಬ್ಯಾಕ್ ಸೇರಿದಂತೆ ಎಲ್ಲವನ್ನೂ ವಿಶಿಷ್ಟ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಟೀಸರ್‌ಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯ ನಂತರ ಕಥೆಯ ಮೂಲ ತಿರುಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ” ಎಂದಿದ್ದಾರೆ.
ಗಾಂಧಿರಾಜನ್ ಅವರು ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎಸ್.ಕೆ. ರಾವ್ ಛಾಯಾಗ್ರಹಣ,, ಲಿಖಿತ್ ಪ್ರಸಾದ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ‘ದೇವಿ ಮಹಾತ್ಮೆ’ ಚಿತ್ರ ತೆರೆಕಾಣಲು ಸಜ್ಜಾಗಿದೆ. ‘ಜನನಿ ಪ್ರೊಡಕ್ಷನ್ಸ್’ ಸಂಸ್ಥೆ ಚಿತ್ರ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
—–





Be the first to comment