ಚಿತ್ರ: ಕ್ಯಾಲೆಂಡರ್
ತಾರಾಗಣ : ಆದರ್ಶ್ ಗುಂಡುರಾಜ್, ದೀಪ ಶ್ರೀ, ಮಾಲಾ ಶ್ರೀ ಮುಂತಾದವರು…
ರೇಟಿಂಗ್ : 3.5/5
ಮಹಿಳೆಯರ ಮುಟ್ಟಿನ ದಿನದ ಕಷ್ಟಗಳು ಈಗ ಗುಟ್ಟಿನ ವಿಚಾರವಾಗಿ ಉಳಿದಿಲ್ಲ. ಋತುಚಕ್ರದ ದಿನಗಳನ್ನು ನಿರ್ವಹಿಸುವ ಸಾಕಷ್ಟು ಮಾರ್ಗಸೂಚಿಗಳ ಬಗ್ಗೆ ಈಗಾಗಲೇ ಹಲವೆಡೆಗಳಲ್ಲಿ ಅವಲೋಕನ ನಡೆಸಲಾಗಿದೆ. ಆದರೆ ಋತುಮತಿಯಾಗಿರುವ ಸಂದರ್ಭದಲ್ಲಿ ಮಹಿಳೆಯರು ಹೇಗೆ ವರ್ತಿಸುತ್ತಾರೆ. ಅದಕ್ಕೆ ಕಾರಣಗಳೇನು? ಅದನ್ನು ಅರ್ಥಮಾಡಿಕೊಳ್ಳದೇ ಹೋದರೆ ನಡೆಯಬಹುದಾದ ದುರಂತಗಳೇನು ಎನ್ನುವುದನ್ನು ಪರದೆಯ ಮೂಲಕ ಸಿನಿಮಾ ರೂಪದಲ್ಲಿ ತೋರಿಸುವ ಪ್ರಯತ್ನವೇ ಕ್ಯಾಲೆಂಡರ್ ಚಿತ್ರ.
ಲವ್ ಫೆಯಿಲ್ಯೂರ್ ಆಗಿ ಕುಡುಕನಾದ ಡಾಕ್ಟರ್ ಆಕಾಶ್ ಈ ಚಿತ್ರದ ನಾಯಕ. ಆದರೆ ಪ್ರಸ್ತುತ ಆತನಿಗೊಬ್ಬಳು ಆತ್ಮೀಯ ಸ್ನೇಹಿತೆ ಇರುತ್ತಾಳೆ. ಆಕೆಯ ಹೆಸರು ಮಾಳವಿಕಾ. ಆಕೆ ಓರ್ವ ವಿವಾಹಿತ ಮಹಿಳೆ. ಮತ್ತೊಂದೆಡೆ ಶಾಲಾ ದಿನಗಳಲ್ಲಿ ಕ್ರಶ್ ಆಗಿದ್ಸ ರಮ್ಯ ಎನ್ನುವ ಹುಡುಗಿ ಕೂಡ ಈಗ ವಿವಾಹಿತೆ. ಆದರೆ ಅವಳೊಂದಿಗೆ ಕೂಡ ಈ ಡಾಕ್ಟರ್ ಗೆ ಆಪ್ತ ಮೈತ್ರಿ. ದುರಂತ ಏನೆಂದರೆ ವೈದ್ಯ ಆಕಾಶ್ ಯಾರ ಜತೆಗೆಲ್ಲ ಆತ್ಮೀಯವಾಗಿರುತ್ತಾನೋ ಅವರೆಲ್ಲ ಒಂದಲ್ಲ ಒಂದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅದಕ್ಕೂ ಡಾಕ್ಟರ ಆಕಾಶ್ ಗೂ ಇರುವ ಸಂಬಂಧವೇನು ಎನ್ನುವುದನ್ನು ಕ್ಲೈಮ್ಯಾಕ್ಸ್ ನಲ್ಲಿ ಅನಾವರಣಗೊಳಿಸಲಾಗಿದೆ.
ಆಕಾಶ್ ಪಾತ್ರಕ್ಕೆ ಆದರ್ಶ್ ಗುಂಡುರಾಜ್ ಜೀವ ನೀಡಿದ್ದಾರೆ. ಪ್ರೇಯಸಿ ನಕ್ಷತ್ರಳಾಗಿ ಸುಶ್ಮಿತಾ ನಾಯಕ್ ಮತ್ತು ಮಾಳವಿಕಾಳಾಗಿ ನಿಶ್ವಿಕಾ ಪಾಟೀಲ್ ಪೈಪೋಟಿಯ ಅಭಿನಯ ನೀಡಿದ್ದಾರೆ. ಗೊಂದಲದೊಂದಿಗೆ ನಿಗೂಢವಾಗಿ ಕಾಣಿಸುವ ರಮ್ಯಾ ಪಾತ್ರ ಕೂಡ ನೆನಪಲ್ಲಿ ಉಳಿಯುತ್ತದೆ. ವಕೀಲನಾಗಿ ಸುಚೇಂದ್ರ ಪ್ರಸಾದ್ ಒಂದು ದೃಶ್ಯದಲ್ಲೇ ವಿಭಿನ್ನತೆಯಿಂದ ಮನ ಸೆಳೆಯುತ್ತಾರೆ. ಮಹಿಳೆಯರ ಕೌಟುಂಬಿಕ ದುರಂತಗಳ ಹಿಂದೆ ಬೀಳುವ ಪೊಲೀಸ್ ತನಿಧಿಕಾರಿಯಾಗಿ ಯುವರಾಜ್ ಒಂಟಿಮನಿ ರಮೇಶ್ ಇಂದಿರಾ ಅದ್ಭುತ ನಟನೆ ನೀಡಿದ್ದಾರೆ.
ಆಕಾಶ್ ಸ್ನೇಹಿತ ಸೂರ್ಯನಾಗಿ ಗುರುನಂದನ್, ಪ್ರಮೋದ್ ಶೆಟ್ಟಿ ಮೊದಲಾದವರ ಪಾತ್ರಗಳು ಕೂಡ ಪ್ರಾಮುಖ್ಯತೆ ಪಡೆದಿವೆ.
ಒಂದು ಕೌಟುಂಬಿಕ ಸಂದೇಶ ಸಾರುವ ಘಟನೆಯನ್ನು ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಎಲ್ಲ ವರ್ಗದ ಪ್ರೇಕ್ಷಕರಿಗೆ ಹತ್ತಿರವಾಗುವಂತೆ ಚಿತ್ರ ಮಾಡಿದ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ.





Be the first to comment