ತನಿಖಾ ಥ್ರಿಲ್ಲರ್ ‘ಬೀರ್ಬಲ್ ಟ್ರಯಾಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ’ ಚಿತ್ರದ ಮುಂದುವರಿದ ಭಾಗವಾದ ‘ಬೀರ್ಬಲ್ ಟ್ರಯಾಲಜಿ ಕೇಸ್ 2’ ಚಿತ್ರ ಅಕ್ಟೋಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
‘ಬೀರ್ಬಲ್ ಟ್ರಯಾಲಜಿ ಕೇಸ್ 2’ ಚಿತ್ರದ ತಾರಾಗಣದಲ್ಲಿ ಹಲವು ದಿಗ್ಗಜ ಕಲಾವಿದರ ಪುನರಾಗಮನ ಸಿನಿಪ್ರಿಯರಲ್ಲಿ ಕುತೂಹಲ ದುಪ್ಪಟ್ಟುಗೊಳಿಸಿದೆ. ಬಹುಭಾಷಾ ತಾರೆ ಖುಷ್ಬೂ ಸುಂದರ್ ಶಕ್ತಿಶಾಲಿ ಪಾತ್ರದ ಮೂಲಕ ಸ್ಯಾಂಡಲ್ವುಡ್ಗೆ ಮರಳುತ್ತಿದ್ದಾರೆ. ಬಹುಕಾಲದ ನಂತರ ಪ್ರತಿಭಾವಂತ ನಟಿ ಡೈಸಿ ಬೋಪಣ್ಣ ಬೆಳ್ಳಿತೆರೆಗೆ ರೀ-ಎಂಟ್ರಿ ಕೊಡುತ್ತಿದ್ದಾರೆ.
ಯುವ ಪ್ರತಿಭೆ ಯೋಗಲಕ್ಷ್ಮಿ ಈ ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಖಳನಟ ಸಂಪತ್ ರಾಜ್ ಪ್ರಮುಖ ಪಾತ್ರಕ್ಕೆ ಸಾಥ್ ನೀಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ಮಹೇನ್ ಸಿಂಹ ಅವರ ಛಾಯಾಗ್ರಹಣವಿದೆ.
ವಿಶಿಷ್ಟ ಚಿತ್ರಕಥೆ, ಚಾಣಾಕ್ಷ ತಿರುವುಗಳು ಹಾಗೂ ಕೌತುಕದ ಕೋರ್ಟ್ರೂಮ್ ಡ್ರಾಮಾದ ಮೂಲಕ ಸದ್ದು ಮಾಡಿದ್ದ ‘ಬೀರ್ಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ’ ಚಿತ್ರ ಪ್ರೇಕ್ಷಕರಿಂದ ಮುಕ್ತ ಕಂಠದ ಪ್ರಶಂಸೆ ಪಡೆದಿತ್ತು. ಅದರಲ್ಲಿ ವಕೀಲ ‘ಮಹೇಶ್ ದಾಸ್’ ಆಗಿ ಎಂ.ಜಿ. ಶ್ರೀನಿವಾಸ್ (ಶ್ರೀನಿ) ಪ್ರದರ್ಶಿಸಿದ ಬುದ್ಧಿವಂತಿಕೆಯ ತನಿಖಾ ಶೈಲಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಯಶಸ್ಸಿನ ಮುಂದುವರಿದ ಭಾಗವಾಗಿ ಇದೀಗ ಮತ್ತಷ್ಟು ಜಟಿಲ ಹಾಗೂ ಕಗ್ಗಂಟಾದ ನಿಗೂಢ ಪ್ರಕರಣವನ್ನು ಭೇದಿಸಲು ಮಹೇಶ್ ದಾಸ್ ‘ಬೀರ್ಬಲ್ ಟ್ರೈಲಜಿ ಕೇಸ್ 2’ ಮೂಲಕ ಅಖಾಡಕ್ಕಿಳಿಯುತ್ತಿದ್ದಾರೆ.
ಈ ಚಿತ್ರದ ಮತ್ತೊಂದು ದೊಡ್ಡ ಆಕರ್ಷಣೆಯೆಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಪವರ್ಫುಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 27 ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದಾರೆ.
—-





Be the first to comment