ಸೆಪ್ಟೆಂಬರ್ 25 ರಂದು ‘ಬಿಂಗೊ’ ತೆರೆಗೆ

ರಾಗಿಣಿ ದ್ವಿವೇದಿ, ಆರ್ ಕೆ ಚಂದನ್ ಅಭಿನಯದ ‘ಬಿಂಗೊ’ ಚಿತ್ರ ಸೆಪ್ಟೆಂಬರ್ 25 ರಂದು ತೆರೆಗೆ ಬರುತ್ತಿದೆ.

ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ “ಬಿಂಗೊ” ಚಿತ್ರದ ಟ್ರೇಲರ್  ಬಿಡುಗಡೆಯಾಗಿದೆ. ಪುಟ್ಟೇಗೌಡ ಅವರು ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಶುಭ ಕೋರಿದರು.

‘ಶಂಭೋ ಶಿವ ಶಂಕರ’ ಚಿತ್ರದ ನಂತರ ನನ್ನ ನಿರ್ದೇಶನದ ‘ಬಿಂಗೊ’ ಚಿತ್ರ ತೆರೆಗೆ ಬರುತ್ತಿದೆ. ರಾಗಿಣಿ ಅವರ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಆರ್ ಕೆ ಚಂದನ್ ನಾಯಕನಾಗಿ ಈ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ.  ರಕ್ಷಾ ನಿಂಬರ್ಗಿ,‌ ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಶ್ರವಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ’ ಎಂದು ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಹೇಳಿದರು.

‘ನಿರ್ದೇಶಕ ಶಂಕರ್ ಅವರು ನನಗೆ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರದ ಮೂಲಕ ಆರ್ ಕೆ ಚಂದನ್ ನಾಯಕನಾಗಿ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಒಂದೊಳ್ಳೆ ಚಿತ್ರತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ’ ಎಂದರು ರಾಗಿಣಿ ದ್ವಿವೇದಿ.

‘ಕಿರುತೆರೆಯಲ್ಲಿ ಜನರು ನೀಡಿದ ಪ್ರೀತಿಗೆ ಧನ್ಯವಾದ. ಈಗ ನಾಯಕನಾಗಿ ಹಿರಿತೆರೆ ಪ್ರವೇಶಿಸಿದ್ದೇನೆ‌. ನನ್ನ ತಂದೆಯ ಸ್ಥಾನದಲ್ಲಿರುವ  ಅಣ್ಣ ಪುನೀತ್ ಹಾಗೂ ನನ್ನ ಭಾವ ಪರಾಂಕುಶ್  ಚಿತ್ರ ನಿರ್ಮಾಣ ಮಾಡಿದ್ದಾರೆ. ನಾನೇ ಕಥೆ ಬರೆದಿದ್ದೇನೆ.  ರಾಗಿಣಿ ದ್ವಿವೇದಿ, ರಾಜೇಶ್ ನಟರಂಗ ಅವರಂತಹ ಅನುಭವಿ ಕಲಾವಿದರ ಜೊತೆ ನಟಿಸಿದ್ದು ಸಂತೋಷವಾಗಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ’ ಎಂದು ನಾಯಕ ಆರ್ ಕೆ ಚಂದನ್ ತಿಳಿಸಿದರು.

ನಿರ್ಮಾಪಕರಾದ ಆರ್ ಕೆ ಪುನೀತ್ ಹಾಗೂ ಪರಾಂಕುಶ್, ನಾಯಕಿ ರಕ್ಷಾ ನಿಂಬರ್ಗಿ, ಛಾಯಾಗ್ರಾಹಕ ನಟರಾಜ್ ಮುದ್ದಾಲ್, ಸಂಗೀತ ನಿರ್ದೇಶಕ ಹಿತನ್ ಹಾಸನ್, ಸಂಕಲನಕಾರ ವೆಂಕಿ, ಸಾಹಸ ನಿರ್ದೇಶಕ ನರಸಿಂಹ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಅಂಜನ್ ಪೂಜಾರಿ ಮಾತನಾಡಿದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!