ಬೆಲ್ ಬಟನ್

‘ಬೆಲ್ ಬಟನ್’ ಚಿತ್ರ ನವೆಂಬರ್ 27ಕ್ಕೆ ತೆರೆಗೆ

ಪ್ರೀತಿ, ಕುಟುಂಬದ ಬಾಂಧವ್ಯ ಹಾಗೂ ತಂದೆ-ತಾಯಿಯ ಕನಸುಗಳನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟಿರುವ ‘ಬೆಲ್ ಬಟನ್’ ಚಿತ್ರ ನವೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್ ಗಮನ ಸೆಳೆದಿದ್ದು, ಇದೀಗ ಬಿಡುಗಡೆಯಾಗಿರುವ ಟ್ರೈಲರ್ ಕೂಡ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಅದರಲ್ಲೂ ಈಗಾಗಲೇ ಬಿಡುಗಡೆಯಾಗಿರುವ ‘ಸಿಂಹ ರಾಶಿ’ ಹಾಗೂ ‘ಸಂಜೆ ಓಡುವ ಸಮಯ’ ಹಾಡುಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಮಧ್ಯಮವರ್ಗದ ತಂದೆಯೊಬ್ಬನಿಗೆ ತನ್ನ ಮಗ ಪ್ರೇಮವಿವಾಹವಾಗಬೇಕು ಎಂಬ ಬಹುದಿನಗಳ ಆಸೆ. ಮಗ ಚಿರು ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂಬ ವಿಷಯ ತಿಳಿದಾಗ ತಂದೆಗೆ ಎಲ್ಲಿಲ್ಲದ ಸಂತೋಷ. ಆದರೆ ಆತ ಪ್ರೀತಿಸಿದ ಹುಡುಗಿ ಪ್ರೀತಿಯನ್ನು ನಿರಾಕರಿಸಿದಾಗ ಕಥೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಪ್ರೀತಿಯ ವೈಫಲ್ಯವನ್ನು ತಂದೆಯಿಂದ ಮುಚ್ಚಿಡುವ ಚಿರು ಮುಂದೆ ಏನು ಮಾಡುತ್ತಾನೆ? ತಂದೆಯ ಕನಸನ್ನು ನನಸು ಮಾಡುತ್ತಾನೆಯೇ? ಎಂಬ ಕುತೂಹಲವೇ ಚಿತ್ರದ ಕಥೆಯ ಹೂರಣ.

ಬೆಲ್ ಬಟನ್

ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲೂ ಲಕ್ಷ್ಮಿ ನರಸಿಂಹ ಎಂ . ರಿಶಿವ್ ವೆಂಚರ್ಸ್ ನಿರ್ಮಾಣದ ಈ ಚಿತ್ರಕ್ಕೆ ಲಕ್ಷ್ಮಿ ನರಸಿಂಹ ಎಂ. ನಿರ್ದೇಶನ ಮಾಡಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, ಹಲವು ಖ್ಯಾತ ನಿರ್ದೇಶಕರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿರುವ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲೂ ಅಭಿನಯಿಸಿದ್ದಾರೆ.

ಸಚಿನ್ ಜೈ, ಲಕ್ಷ್ಮಿ ನರಸಿಂಹ, ನಿಸರ್ಗ ಅಪ್ಪಣ್ಣ, ಚೈತ್ರ ಗೌಡ, ಪ್ರಮೀಳಾ ಸುಬ್ರಹ್ಮಣ್ಯ, ನೊಣವಿನಕೆರೆ ರಾಮಕೃಷ್ಣಯ್ಯ, ಭಾನು ಪ್ರಕಾಶ್, ನಿಖಿತಾ ಶೆಟ್ಟಿ, ಅಭಿಗುರು, ವೇಣು, ಪವನ್ ರಿಚ್ಚಿ, ತರುಣ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಲಕ್ಕಿ ಛಾಯಾಗ್ರಹಣ, ಆಕಾಶ್ ಮಹೇಂದ್ರಕರ್ ಸಂಕಲನ, ವಿಶಾಲ್ ಆಲಾಪ್ ಸಂಗೀತ, ಮದನ್ ಮ್ಯಾಡಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ದೇವು ಪ್ರೊಡಕ್ಷನ್ ಡಿಸೈನರ್ ಆಗಿ, ಸುಪ್ರೀಮ್ ಸುಬ್ಬು ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ವೀರೇಶ್ ಮೇಕಪ್ ಹಾಗೂ ಜೇಕಬ್ ಮ್ಯಾಥ್ಯೂ ಬಣ್ಣದ ಸಂಯೋಜನೆ ಮಾಡಿದ್ದಾರೆ. ನಿರ್ದೇಶನ ತಂಡದಲ್ಲಿ ದುಷ್ಯಂತ್, ಲಕ್ಷ್ಮೀಶ್, ದೀಪಕ್, ತರುಣ್, ಪ್ರದೀಪ್, ಪವನ್, ಸಿದ್ಧಾರ್ಥ್ ಹಾಗೂ ಅಣ್ಣೇಗೌಡ ಇದ್ದಾರೆ. ಸುಧೀಂದ್ರ ವೆಂಕಟೇಶ್ ಚಿತ್ರದ ಪಿ.ಆರ್.ಒ ಆಗಿದ್ದಾರೆ.

ಒಟ್ಟಿನಲ್ಲಿ, ಕೇವಲ ಪ್ರೇಮಕಥೆಯಾಗಿ ಉಳಿಯದೆ ತಂದೆ-ಮಗನ ಭಾವನಾತ್ಮಕ ಸಂಬಂಧ, ಪೋಷಕರ ಕನಸು ಹಾಗೂ ಮಕ್ಕಳ ಜವಾಬ್ದಾರಿಯನ್ನು ತೆರೆದಿಡುವ ‘ಬೆಲ್ ಬಟನ್’ ಚಿತ್ರ ಕುಟುಂಬ ಸಮೇತ ವೀಕ್ಷಿಸಬಹುದಾದ ಮನರಂಜನಾತ್ಮಕ ಚಿತ್ರವಾಗಿ ಮೂಡಿಬರುವ ನಿರೀಕ್ಷೆಯಿದೆ.

ಬೆಲ್ ಬಟನ್

Be the first to comment

Leave a Reply

Your email address will not be published. Required fields are marked *

Translate »
error: Content is protected !!