ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ

Movie Review: ಬ್ಯಾಂಕ್ ರಾಬರಿ ಹಿಂದೆ ಇದೆ ಭಾರೀ ಸತ್ಯ..!

ಚಿತ್ರ: ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ
ನಿರ್ದೇಶಕರು: ಅಭಿಷೇಕ್ ಮಂಜುನಾಥ್
ನಿರ್ಮಾಪಕರು: ಎಚ್.ಕೆ.‌ಪ್ರಕಾಶ್
ತಾರಾಗಣ: ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು.
ರೇಟಿಂಗ್: 3.5/5

ಒಂದು ಬ್ಯಾಂಕ್ ದರೋಡೆ ಮಾಡಲು ಬಂದವರು ಒಂದು‌ ದಿನವಿಡೀ ಬ್ಯಾಂಕ್ ಒಳಗೆ ಬಂಧಿಸಲ್ಪಡುತ್ತಾರೆ. ಹೊರಗಡೆ ಪೊಲೀಸರು ಸುತ್ತುವರಿಯುತ್ತಾರೆ. ಒಳಗೆ ಭಯ ಬೀಳಬೇಕಾದ ಕಳ್ಳರಿಗೆ ಹೊಸ ಜ್ಞಾನೋದಯವಾಗುತ್ತದೆ. ಬದಲಾದ ಮನದಲ್ಲಿ ಹೊಸ‌ ತೀರ್ಮಾನದ ಉದಯವಾಗುತ್ತದೆ. ಏನೀ ಬದಲಾವಣೆಗೆ ಕಾರಣ ಎನ್ನುವುದೇ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ಯ ಹೂರಣ.

ಹಳ್ಳಿಯೊಂದರಲ್ಲಿರುವ ಭಾಗ್ಯಲಕ್ಷ್ಮೀ ಕೋಆಪರೇಟಿವ್ ಬ್ಯಾಂಕ್ ಒಳಗೆ ಐದು ಮಂದಿ ದರೋಡೆಕೋರರು ನುಗ್ಗುತ್ತಾರೆ. ಹಾಡಹಗಲೇ ಒಳಗಡೆ ಸಿಬ್ಬಂದಿ ಮತ್ತು ಗ್ರಾಹಕರು ಇರುವಾಗಲೇ ಈ ಘಟನೆ ನಡೆಯುತ್ತದೆ. ಆದರೆ ಶಟರ್ ಹೊರಗಿನಿಂದ ಲಾಕ್ ಆಗುವುದರಿಂದಾಗಿ ಕಳ್ಳರು ಒಳಗಡೆಯೇ ಉಳಿದು ಬಿಡುತ್ತಾರೆ. ಅದೇ ಸಮಯದಲ್ಲಿ ಹೊರಗಡೆ ಪೊಲೀಸರು ಕೂಡ ಬಂದಿರುತ್ತಾರೆ. ಮುಂದಿನದೆಲ್ಲ ಪರದೆಯ ಮೇಲೆ ನೋಡುವುದೇ ಚಂದ.

ಪೂರ್ತಿ ಚಿತ್ರದ ಪ್ರಮುಖ‌ ಭಾಗ ಒಂದು ಬ್ಯಾಂಕ್ ಒಳಗಡೆಯೇ ಹೇಳಲಾಗಿದೆ. ಐದಾರು ಮಂದಿ ಯುವಕರು ಮತ್ತು ಬೆರಳೆಣಿಕೆಯ ಪಾತ್ರಗಳೊಂದಿಗೆ ಒಂದು ದಿನದ ಕಥೆಯನ್ನು ಎರಡೂವರೆ ಗಂಟೆಗಳ ಚಿತ್ರವಾಗಿಸಿದ ನಿರ್ದೇಶಕನ ಬುದ್ದಿವಂತಿಕೆ ಆಪಾರವಾಗಿರುವಂಥದ್ದೇ ಸರಿ. ದರೋಡೆ ಕೋರರಲ್ಲೇ ಒಬ್ಬ ನಾಯಕ. ಆತನೇ ಚಿತ್ರದ ಕಥೆಗೂ ನಾಯಕ. ಆತನಿಗೆ ಬ್ಯಾಂಕ್ ಒಳಗೆಯೇ ಸಿಗುವ ಪ್ರೇಯಸಿ. ದರೋಡೆ ಪ್ರಯತ್ನದಲ್ಲೇ ಪ್ರೇಮದ ಕನಸು. ಒಂದು ತತ್ವ ಪದ, ಇನ್ನೊಂದು ಡ್ಯುಯೆಟ್ಟು ಮತ್ತು ಹಲವು ಫೈಟು.. ಇದೆಲ್ಲ ಹೇಗೆ ಸಾಧ್ಯ ಅನ್ನೋದನ್ನು ಚಿತ್ರ ನೋಡಿದಾಗಲೇ ಅರ್ಥಮಾಡಿಕೊಳ್ಳಲು ಸಾಧ್ಯ.

ಚಿತ್ರದಲ್ಲಿ ದರೋಡೆಕೋರರ ನಾಯಕನಾಗಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಈತನನ್ನು ಸಹ ಸದಸ್ಯರೆಲ್ಲ ಗುರುತಿಸುವುದು ಟೈಗರ್ ಎನ್ನುವ ಹೆಸರಿನಿಂದ! ನಾಯಕನ‌ ವಾಚಾಳಿತನ ಮತ್ತು ಎಲ್ಲ ಸಂದರ್ಭಗಳಲ್ಲಿ ‌ಕೂಡ‌ ಏಗಿಕೊಂಡು ಹೋಗುವ ಛಾತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ದೀಕ್ಷಿತ್ ಶೆಟ್ಟಿ.

ಬ್ಯಾಂಕ್ ಒಳಗೆ ದೀಕ್ಷಿತ್ ಗೆ ಸಿಗುವ ಜೋಡಿ ಅರ್ಪಿತಾ. ಆಕೆಗೆ ತನ್ನ ತನ್ನನ್ನೇ ಅರ್ಪಿಸಿಕೊಳ್ಳುವ ನಾಯಕನಿಗೆ ಆಕೆ ಕೂಡ ಸಹಕಾರ ನೀಡುತ್ತಾಳೆ. ಅರ್ಪಿತಾಳ ಈ ಸಹಕಾರಕ್ಕೆ ಕಾರಣ ಏನು ಎನ್ನುವುದು ಕಥೆಯೊಳಗಿನ ಪ್ರಮುಖ ಟ್ವಿಸ್ಟ್ ಆಗಿರುತ್ತದೆ. ಅರ್ಪಿತಾ ಪಾತ್ರದಲ್ಲಿ ನಟಿಸಿರುವ ಬೃಂದಾ ಆಚಾರ್ಯ ಆಕರ್ಷಕವಾಗಿ ಕಾಣಿಸಿದ್ದಾರೆ.

ಬ್ಯಾಂಕ್ ಒಳಗಡೆ ಸಿಕ್ಕಿಕೊಳ್ಳುವ ಸಿಬ್ಬಂದಿ ಮತ್ತು ಗ್ರಾಹಕರ ತಂಡ ಕೂಡ ಪಾತ್ರಗಳ‌ ವೈವಿಧ್ಯತೆ ಪಡೆದಿದೆ.‌ ಜಾನಪದ ಗಾಯಕಿಯಾಗಿ ಕಾಣಿಸಿರುವ ಉಷಾ ಭಂಡಾರಿಯವರು ಸಂಭಾಷಣೆ ಮಾತ್ರವಲ್ಲ ಹಾಡಿನ‌ ಮೂಲಕವೂ‌ ಮನ ಸೆಳೆಯುತ್ತಾರೆ. ಹಾಗೆಯೇ ಬ್ಯಾಂಕ್ ಒಳಗೆ ಮತ್ತು ಹೊರಗೆ ಇಬ್ಬರು ಯೂಟ್ಯೂಬರ್ ಗಳನ್ನು ಕೂಡ ತೋರಿಸಲಾಗಿದೆ. ಒಳಗಿರುವಾತ ಗಂಭೀರತೆಯ ಮಧ್ಯೆ ಹಾಸ್ಯ ತೋರಿದರೆ ಹೊರಗಿರುವ ಯೂಟ್ಯೂಬರ್ ಪಾತ್ರ ನಿರ್ವಹಿಸಿರುವ ಗೋಪಾಲಕೃಷ್ಣ ದೇಶಪಾಂಡೆ ಘಟನೆಯ ಗಂಭೀರತೆಯ ಅವಲೋಕನಕ್ಕೆ ಕಾರಣವಾಗಿದ್ದಾರೆ.

ಬ್ಯಾಂಕ್ ರಾಬರಿ ಎನ್ನುವುದು ಚುನಾವಣಾ ಸಂದರ್ಭದಲ್ಲಿ ರಾಜಕೀಯವಾಗಿ ಬೀರಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಚರ್ಚೆ ನಡೆಸುವ ಚಾಣಾಕ್ಷ ಪಾತ್ರವನ್ನು ಶ್ರುತಿಹರಿಹರನ್ ಮಾಡಿದ್ದಾರೆ. ಪೊಲೀಸರಿಗೆ ಸಾಕ್ಷಿ ಹೇಳಲು ಹೋಗಿ ಗೋಳಿಗೆ ಸಿಕ್ಕಿಕೊಳ್ಳುವ ತಿಪ್ಪೇಸ್ವಾಮಿಯಾಗಿ ವಿಜಯ್ ಚೆಂಡೂರ್ ನಟಿಸಿದ್ದಾರೆ. ಹೊರಗಡೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪಾಡುಪಡುವ ಪೊಲೀಸ್ ಇನ್ಸ್ಪೆಕ್ಟರ್ ಅಜಿತ್ ಪಾತ್ರ ಕೂಡ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.

ಕಾಮಿಡಿ ಥ್ರಿಲ್ಲರಾಗಿ ಮೂಡಿ‌ಬಂದಿರುವ ಈ ಚಿತ್ರಕ್ಕೆ ಜುಡಾ ಸ್ಯಾಂಡಿ‌‌ ಸಂಗೀತ ಪೂರಕವಾಗಿ ಮೂಡಿ ಬಂದಿದೆ. ಕ್ಲೈಮ್ಯಾಕ್ಸ್ ನಲ್ಲಿನ ಗ್ರಾಫಿಕ್ಸ್ ಕಥೆಯನ್ನು ಪ್ರೇಕ್ಷಕರಿಗೆ ಹತ್ತಿರಗೊಳಿಸಲು ಸಹಕಾರಿಯಾಗಿದೆ. ಚಿತ್ರ ನೋಡುತ್ತಾ ಹೋದಂತೆ ಇದು ಬರೀ ದರೋಡೆ ಕುರಿತಾದ ಕಥೆ ಮಾತ್ರವಲ್ಲ ಎನ್ನುವುದು ಸಾಬೀತಾಗುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!