‘ರೇಣುಕಾಸ್ವಾಮಿ ಕೊಲೆ ತಡೆಯಲು ಪ್ರಯತ್ನಿಸಿದ್ದೆ. ತಾನು ಕೊಲೆಯಲ್ಲಿ ಭಾಗಿಯಾಗುವ ಉದ್ದೇಶ ಹೊಂದಿರಲಿಲ್ಲ, ದರ್ಶನ್ ಒತ್ತಡದಿಂದ ಸಿಕ್ಕಿಬಿದ್ದೆ’ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ಎಸ್ ಕ್ಷಮಾದಾನ ಕೋರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದರೂ ದರ್ಶನ್ ಹಲ್ಲೆ ಹಾಗೂ ಒದೆಯುವುದನ್ನು ನಿಲ್ಲಿಸಲಿಲ್ಲ . ದರ್ಶನ್ ರೇಣುಕಾಸ್ವಾಮಿ ಎದೆಯ ಮೇಲೆ ನಿಂತು ಸಿಗರೇಟ್‌ನಿಂದ ಸುಟ್ಟಿದ್ದರು ಎಂದೂ ಅರ್ಜಿಯಲ್ಲಿ ಗಂಭೀರ ಆರೋಪಿಸಲಾಗಿದೆ. ಈ ಕೃತ್ಯವನ್ನು ತಡೆಯುವ ಉದ್ದೇಶದಿಂದ ತಾನು ದರ್ಶನ್ ಅವರ ಕಾಲನ್ನು ದೂರ ಸರಿಸಿದ್ದಾಗಿ ಪ್ರದೋಷ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ರೇಣುಕಾಸ್ವಾಮಿ ಮೃತಪಟ್ಟಿರುವ ವಿಚಾರ ತಿಳಿದಾಗ ದರ್ಶನ್ ತಮ್ಮ ಬಳಿ ಇದ್ದ ಗನ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ಪ್ರದೋಷ್ ಆರೋಪಿಸಿದ್ದಾರೆ. ನಂತರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲೂ ದರ್ಶನ್ ಭಾಗಿಯಾಗಿದ್ದರು. ರೇಣುಕಾಸ್ವಾಮಿ ಮೃತಪಟ್ಟಿರುವುದು ತಿಳಿದ ಬಳಿಕ ಭಯಗೊಂಡಿದ್ದೆ. ದರ್ಶನ್ ಅವರ ಒತ್ತಡ ಮತ್ತು ಬೆದರಿಕೆಯಿಂದ ಮುಂದಿನ ಬೆಳವಣಿಗೆಗಳಲ್ಲಿ ಭಾಗಿಯಾಗಬೇಕಾಯಿತು ಎಂದು ಹೇಳಿದ್ದಾರೆ.
ಪ್ರಕರಣದ ಸಂಬಂಧ ನಾಗರಾಜ್‌ಗೆ 5 ಲಕ್ಷ ರೂಪಾಯಿ ಹಾಗೂ ವಿನಯ್‌ಗೆ 10 ಲಕ್ಷ ರೂಪಾಯಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಮೃತದೇಹವನ್ನು ಸ್ಥಳಾಂತರಿಸಿ ಘಟನೆ ಬೇರೆಡೆ ನಡೆದಂತೆ ಸುಳ್ಳು ಕಥೆ ಸೃಷ್ಟಿಸಿ ಪೊಲೀಸರಿಗೆ ಹೇಳಿಕೆ ನೀಡುವಂತೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.
ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಆದ್ದರಿಂದ ತನಗೆ ಕ್ಷಮಾದಾನ ನೀಡಿ ಅಪ್ರೂವರ್ ಆಗಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿದ್ದು, 59ನೇ ಸಿಸಿಹೆಚ್ ನ್ಯಾಯಾಲಯದ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.
—





Be the first to comment