ಸ್ಪಾರ್ಕ್

ಸ್ಪಾರ್ಕ್ ಚಿತ್ರದಲ್ಲಿ ಪ್ರೇಮ್, ನಿರಂಜನ ಜೊತೆಗೆ ಅಭಯ ವಸಿಷ್ಠ ಪರಿಚಯ

ಇದೇ ವಾರ ಸಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿರುವ ಚಿತ್ರ ಸ್ಪಾರ್ಕ್. ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಿನೆಮಾ‌ ಕುರಿತಾದ ಇನ್ನಷ್ಟು ವಿಶೇಷಗಳನ್ನು ಹಂಚಿಕೊಳ್ಳಲಾಯಿತು.

ನಿರಂಜನ್ ಸುಧೀಂಧ್ರ ನಾಯಕರಾಗಿ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವೆಲ್ಲವನ್ನು ಮೀರಿಸುವಂಥ ಚಿತ್ರ ಸ್ಪಾರ್ಕ್. ಈ ಮಾತನ್ನು ಚಿತ್ರತಂಡ ಹೇಳಿಕೊಂಡೇ ಬರುತ್ತಿದೆ. ಇದೀಗ ಚಿತ್ರದ ಟ್ರೇಲರ್ ಕೂಡ ಅದನ್ನೇ ಸಾರುತ್ತಿದೆ. ಇತ್ತೀಚೆಗಷ್ಟೇ ಉಪೇಂದ್ರ ಅವರಿಂದ ಗದಗದಲ್ಲಿ ಬಿಡುಗಡೆಗೊಂಡ ಸ್ಪಾರ್ಕ್ ಚಿತ್ರದ ಟ್ರೇಲರ್ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಸೋಮವಾರ ಬೆಂಗಳೂರಿನ ಮಾಧ್ಯಮದ ಮುಂದೆ ಟ್ರೇಲರ್ ಪ್ರದರ್ಶಿಸಿದ ಚಿತ್ರತಂಡ, ಹೊಸ ಕಲಾವಿದ ಅಭಯ್ ವಸಿಷ್ಠರನ್ನು ಪರಿಚಯಿಸಿತು.

ಅಭಯ್ ವಸಿಷ್ಠ ಸ್ಪಾರ್ಕ್ ಚಿತ್ರದ ನಿರ್ಮಾಪಕರ ಪುತ್ರ. ಗರೀಮಾ ಅವಿನಾಶ್ ವಸಿಷ್ಠ ದಂಪತಿ ನಿರ್ಮಾಣದ ಈ ಚಿತ್ರದಲ್ಲಿ ಪುತ್ರ ಅಭಯ್ ವಸಿಷ್ಠ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕರ ಪುತ್ರ, ಸ್ಪುರದ್ರೂಪಿ, ಪ್ರತಿಭಾವಂತ. ಆದರೆ ನಾಯಕ‌ ನಟನಾಗಲು ಬಯಸದೆ ಖಳನಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಭಯ್, ತಾವು ವಿದೇಶದಲ್ಲೇ ಹುಟ್ಟಿ ಬೆಳೆದ ಕಾರಣ ಕನ್ನಡ ಭಾಷೆ ಅರಿತಿಲ್ಲ. ವಿದೇಶಿ ರಂಗಭೂಮಿಯ ಅನುಭವ ಮಾತ್ರ ಇದೆ. ಅದು ಈ ಸಿನೆಮಾ ಕ್ಷೇತ್ರಕ್ಕಿಂತ ತುಂಬ ವಿಭಿನ್ನ. ಮುಂದೆ ಕನ್ನಡ ಭಾಷೆ ಮತ್ತು ಸಿನೆಮಾ‌ ಬಗ್ಗೆ ಹೆಚ್ಚು ಕಲಿತ ಬಳಿಕ‌ ಕನ್ನಡದಲ್ಲಿ ನಾಯಕನಾಗುವ ಕನಸಿದೆ. ಸದ್ಯಕ್ಕೆ ಸ್ಪಾರ್ಕ್ ನಲ್ಲಿ ಖಳನ ಪಾತ್ರವಾದರೂ ತುಂಬ ಚೆನ್ನಾಗಿದೆ. ಹಾಗಾಗಿಯೇ ಒಪ್ಪಿಕೊಂಡೆ ಎಂದರು.

ಸ್ಪಾರ್ಕ್

“ನನಗೆ ಖಳನಾಗಲು ತಕ್ಕ ಎದುರಾಳಿಯಂತೆ ಅಭಯ್ ಇದ್ದರು. ಅವರ ಎತ್ತರ ನನಗೆ ಹೊಂದಿಕೊಳ್ಳುವ ಹಾಗೆ ಇತ್ತು. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಮುಖ ಟೊಮೆಟೊ‌ ಹಣ್ಣಂತೆ ಕೆಂಪಾಗುತ್ತಿತ್ತು. ವಿದೇಶದಿಂದ ಬಂದರೂ ಚೆನ್ನಾಗಿ ನಟನೆ ಮಾಡಿದ್ದಾರೆ. ಪರದೆ ಮೇಲೆ ಕಂಡಾಗ ನಿಜಕ್ಕೂ ನಿಮಗೆ ಒಬ್ಬ ಒಳ್ಳೆಯ ನಟನ ದರ್ಶನವಾಗಲಿದೆ” ಎಂದು ನಿರಂಜನ್ ಸುಧೀಂದ್ರ ಹೇಳಿದರು. ತಮ್ಮ‌ ಪಾತ್ರ ಸೇರಿದಂತೆ ಒಟ್ಟು ಚಿತ್ರವನ್ನು ನೋಡಿದಾಗ ಇದು ನನ್ನ ವೃತ್ತಿ ಬದುಕಿನಲ್ಲಿ ದೊಡ್ಡ ಯಶಸ್ಸು ತರುವ ಭರವಸೆ ಮೂಡಿಸಿದೆ ಎಂದರು. ಭ್ರಷ್ಟಾಚಾರದ ವಿರುದ್ಧದ ಚಿತ್ರವಾದರೂ ಕಥೆ ಮನರಂಜನಾತ್ಮಕವಾಗಿ ಸಾಗುತ್ತದೆ. ತಾತಂದಿರಿಂದ ಅಚಿಕ್ಕ‌ ಮಕ್ಕಳವರೆಗೂ ಇಷ್ಟವಾಗುವಂಥ ವಿಚಾರ ಚಿತ್ರದಲ್ಲಿದೆ” ಎಂದರು ನಿರಂಜನ್.

ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ, “ನಿರ್ಮಾಪಕರು ಚಿತ್ರಕ್ಕಾಗಿ ನಾನು ಕೇಳಿದ ಎಲ್ಲ ಕಲಾವಿದರನ್ನು ಕೊಟ್ಟು ಸಹಕರಿಸಿದ್ದಾರೆ. ಅವರ ಸಹಕಾರದಿಂದಾಗಿಯೇ ಚಿತ್ರ ಚೆನ್ನಾಗಿ ಮೂಡಿಬಂದಿದೆ” ಎಂದರು.

ಲವ್ಲಿ ಸ್ಟಾರ್ ಪ್ರೇಮ್ ಮೊದಲ ಬಾರಿಗೆ ಖಳನಾಗಿ ನಟಿಸಿರುವ ಚಿತ್ರ ಇದು. ನಿರ್ಮಾಪಕರ ಗುಣಗಾನ ಮಾಡಿದ ಅವರು, “ಸ್ಟಾರ್ ಸಿನೆಮಾ ಹಿಂದೆ ಹೋಗದೆ ಹೊಸಬರ ಚಿತ್ರ‌‌ಮಾಡಿದ್ದಾರೆ. ಒಳ್ಳೆಯ ಚಿತ್ರವನ್ನೇ ಮಾಡಿದ್ದಾರೆ. ನನ್ನದು ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ. ಆದರೆ ಅದೇ ಪೊಲೀಸ್ ವೈಯಕ್ತಿಕವಾಗಿ ಸ್ಟೈಲಿಷ್ ಆಗಿ ಕಾಣಿಸುವಂಥ ಪ್ರಯತ್ನ ಮಾಡಿದ್ದೇನೆ” ಎಂದರು.

ಹಾಸ್ಯನಟ ಧರ್ಮಣ್ಣ ಕಡೂರು ಅವರ ಪ್ರಕಾರ, “ನಿರಂಜನ್ ಮತ್ತು ಪ್ರೇಮ್ ಚಿತ್ರದ ಕೇಂದ್ರಬಿಂದುಗಳು” ಅಂದರು. ನಿರಂಜನ್ ಜೊತೆ ತಾವು ಕೂಡ ಪತ್ರಕರ್ತರಾಗಿ ಕಾಣಿಸಲಿದ್ದು, ತಂಬ್ ನೇಲ್ ಪತ್ರಕರ್ತನಾಗಿ ನಗಿಸುವ ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ವಿಶ್ವಾಸ್ ಎಮ್. ನಾಯರ್ ಭಾಗಿಯಾಗಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!