ನರಿ ಕಥೆ

‘ನರಿ ಕಥೆ’ ಹೇಳಲು ಹೊರಟ ದಯಾಳ್ ಪದ್ಮನಾಭನ್

ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ನರಿ ಕಥೆ’ ಚಿತ್ರಕ್ಕೆ ದಯಾಳ್ ಪದ್ಮನಾಭನ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಆ ಕರಾಳ ರಾತ್ರಿ’ ಚಿತ್ರದ ಬಳಿಕ ಸುಮಾರು ಮೂರು ವರ್ಷಗಳ ನಂತರ ಅವರು ಕನ್ನಡ ಚಿತ್ರ ನಿರ್ಮಾಣಕ್ಕೆ ಮರಳಿದ್ದಾರೆ. ವಿಭಿನ್ನ ಕಥಾಹಂದರ ಹಾಗೂ ಪಾತ್ರಗಳಿಗೆ ಹೆಚ್ಚಿನ ಮಹತ್ವ ನೀಡಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಬಿ. ಸುರೇಶ್, ಮಿತ್ರ, ವೀಣಾ ಸುಂದರ್, ಬಿಂಬಶ್ರೀ, ಸುಭಾಷ್ ಪಾರ್ಥ ಹಾಗೂ ಪ್ರಿಯಾ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ದಯಾಳ್ ಪದ್ಮನಾಭನ್ (ನಿರ್ದೇಶಕ ಹಾಗೂ ನಿರ್ಮಾಪಕ)

ಇದು ಸಂಪೂರ್ಣವಾಗಿ ಪಾತ್ರಾಧಾರಿತ ಸಿನಿಮಾ. ಇಲ್ಲಿ ಹೀರೋ, ಹೀರೋಯಿನ್‌ಗಳಿಗಿಂತ ಕಥೆ ಮತ್ತು ಪಾತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸುಮಾರು ಐದಾರು ವರ್ಷಗಳ ಹಿಂದೆಯೇ ಈ ಚಿತ್ರದ ಚಿತ್ರಕಥೆ ಸಿದ್ಧವಾಗಿತ್ತು. ಹಲವು ಕಾರಣಗಳಿಂದ ಸಿನಿಮಾ ಆರಂಭವಾಗಿರಲಿಲ್ಲ. ದೇವರ ಆಶೀರ್ವಾದದಿಂದ ಈಗ ಚಿತ್ರವನ್ನು ಕಾರ್ಯರೂಪಕ್ಕೆ ತಂದಿದ್ದೇನೆ. ನನ್ನ ನಿರ್ದೇಶನದ ವೃತ್ತಿಜೀವನದ 23ನೇ ಚಿತ್ರ ಇದಾಗಿದ್ದು, ಕನ್ನಡದಲ್ಲಿ 19ನೇ ಸಿನಿಮಾವಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಐದು ನನ್ನ ಅದೃಷ್ಟದ ಸಂಖ್ಯೆ. ಈ ಸಿನಿಮಾದ ಬಗ್ಗೆಯೂ ನನಗೆ ವಿಶೇಷ ನಿರೀಕ್ಷೆ ಮತ್ತು ವಿಶ್ವಾಸವಿದೆ. ವಿಭಿನ್ನ ಕಥೆ ಹಾಗೂ ತೀವ್ರ ಭಾವನೆಗಳನ್ನು ಒಳಗೊಂಡ ಸುಂದರ ಚಿತ್ರವಾಗಿ ‘ನರಿ ಕಥೆ’ ಮೂಡಿಬರಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ಮಾರ್ಚ್ 6ರಂದು ಮಹಾಶಿವರಾತ್ರಿಯ ಶುಭದಿನದಂದು ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.

ನರಿ ಕಥೆ

ಬಿ. ಸುರೇಶ್ (ನಟ)

ಸುಮಾರು ಏಳೆಂಟು ದಿನಗಳ ಹಿಂದೆ ದಯಾಳ್ ಅವರು ಕರೆ ಮಾಡಿ ಚಿತ್ರದ ಕಥೆ ಹೇಳಿದಾಗ ನನಗೆ ತುಂಬಾ ಸಂತೋಷವಾಯಿತು. ಕಥೆ ಕೇಳಿದ ತಕ್ಷಣವೇ ಇಂತಹ ಒಂದು ಪಾತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಮೂಡಿತು. ನಾನು ಇಷ್ಟಪಟ್ಟಂತಹ ಪಾತ್ರವೇ ಈ ಚಿತ್ರದಲ್ಲಿ ಸಿಕ್ಕಿದೆ. ಕಥೆಗೆ ಮಹತ್ವವಿರುವ ಪಾತ್ರ ಇದಾಗಿದ್ದು, ದಯಾಳ್ ಅವರೊಂದಿಗೆ ಹಾಗೂ ಇಡೀ ಚಿತ್ರತಂಡದ ಜೊತೆ ಕೆಲಸ ಮಾಡುತ್ತಿರುವುದು ಬಹಳ ಖುಷಿಯ ವಿಚಾರ ಎಂದರು.

ಮಿತ್ರ (ನಟ)

‘ನರಿ ಕಥೆ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ನನ್ನನ್ನು ಸಿನಿಮಾದ ಮುಖ್ಯವಾಹಿನಿಗೆ ಪರಿಚಯಿಸಿದವರು ದಯಾಳ್ ಪದ್ಮನಾಭನ್ ಅವರು. ಗಣೇಶ್ ಅವರ ಮೂಲಕ ನನ್ನನ್ನು ಗುರುತಿಸಿ ಅವಕಾಶ ನೀಡಿದ್ದರು. ಇದೀಗ ಅವರ ನಿರ್ದೇಶನದಲ್ಲಿ ಮತ್ತೊಮ್ಮೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿಯ ವಿಚಾರ. ಒಳ್ಳೆಯ ಕಥೆ ಹಾಗೂ ಪ್ರತಿಭಾವಂತ ಕಲಾವಿದರ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

ವೀಣಾ ಸುಂದರ್ (ನಟಿ )

ಮೊದಲ ಬಾರಿಗೆ ಕಥೆ ಕೇಳಿದಾಗಲೇ ನನಗೆ ಬಹಳ ಇಷ್ಟವಾಯಿತು. ಅದರಲ್ಲೂ ಕಥೆಯ ಎರಡನೇ ಭಾಗ ತುಂಬಾ ಚೆನ್ನಾಗಿದೆ. ದಯಾಳ್ ಪದ್ಮನಾಭನ್ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಉತ್ತಮ ಅನುಭವ. ಅವರು ಒಬ್ಬ ಪರ್ಫೆಕ್ಷನಿಸ್ಟ್. ಕಲಾವಿದರಿಂದ ಯಾವ ರೀತಿಯ ಅಭಿನಯ ಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಸಿನಿಮಾಕ್ಕೆ ಅಗತ್ಯವಿರುವಷ್ಟು ಮಾತ್ರ ಚಿತ್ರೀಕರಣ ಮಾಡುವ ಅವರ ಶಿಸ್ತು ಮತ್ತು ಕಾರ್ಯವೈಖರಿ ಮೆಚ್ಚುವಂತಹದ್ದು ಎಂದರು.

ನರಿ ಕಥೆ

ಅಭಿಷೇಕ್ ಎಸ್. ಎನ್. (ಸಂಗೀತ ನಿರ್ದೇಶಕ) :

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತಕ್ಕೆ ವಿಶೇಷ ಮಹತ್ವವಿದೆ. ಕಥೆಯ ಭಾವನೆಗಳಿಗೆ ಪೂರಕವಾಗಿ ಸಂಗೀತ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಚಿತ್ರದಲ್ಲಿ ಮೂರು ಹಾಡುಗಳಿರುತ್ತವೆ ಎಂದರು.

ನಟ ಸುಭಾಷ್ ಪಾರ್ಥ, ನಟಿಯರಾದ ಬಿಂಬಶ್ರೀ ಹಾಗೂ ಪ್ರಿಯಾ ಗೌಡ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಕ್ರಿಯೇಟಿವ್ ಹಾಗೂ ಕಾರ್ಯಕಾರಿ ನಿರ್ಮಾಪಕ ಅವಿನಾಶ್ ಯು. ಶೆಟ್ಟಿ ಮಾತನಾಡಿ, ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಬೆಂಬಲ ಎಂದಿನಂತೆ ಇರಲಿ ಎಂದು ಮನವಿ ಮಾಡಿದರು. ಛಾಯಾಗ್ರಾಹಕ ಅಮರ್ ಗೌಡ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!