ಚಿತ್ರ: ಲಂಬೋದರ 2.0
ನಿರ್ದೇಶನ: ಸುನಿ
ನಿರ್ಮಾಣ: ಮಾಸ್ ಪ್ರೊಡಕ್ಷನ್
ತಾರಾಗಣ: ಅನಿಲ್ ಶೆಟ್ಟಿ, ಸಾಚಿ ಬಿಂದ್ರ, ಕುನಾಲ್ ಕಪೂರ್ ಮೊದಲಾದವರು…
ರೇಟಿಂಗ್ : 3.5/5
ಕಥಾ ನಾಯಕನೇ ಹ್ಯಾಕರ್. ಆದರೆ ಆತ ಒಂದಷ್ಟು ಮನುಷ್ಯತ್ವ ಉಳಿಸಿಕೊಂಡಿರುವ ಹ್ಯಾಕರ್. ಆತ ಸೃಷ್ಟಿಸಿದ ಎಐಗಳಲ್ಲೊಂದು ಲಂಬೋದರ. ಇದು ಗಣಪನ ಹೆಸರು. ಇಂಥದೊಂದು ಹೆಸರಿಟ್ಟು ಎಲ್ಲರ ವಿಘ್ನ ನಿವಾರಣೆಗೆ ಪ್ರಯತ್ನಿಸುವ ಅವ್ಯಕ್ತ, ತಾನೇ ವಿಘ್ನಕ್ಕೆ ಸಿಲುಕಿಕೊಳ್ಳುತ್ತಾನೆ. ಯಾಕೆಂದರೆ ಈತನಿಗೂ ಲಕುಮಿ ಅಂದರೆ ಇಷ್ಟವೇ. ಆದರೆ ಎಷ್ಟೇ ದೊಡ್ಡ ಮೊತ್ತ ಇರುವ ಬ್ಯಾಂಕ್ ಅಕೌಂಟ್ ನಿಂದಲೂ ತನ್ನ ನಿಗದಿತ ಅಮೌಂಟ್ ನಿಂದ ಹೆಚ್ಚು ದೋಚಲಾರ. ಆದರೆ ಎಲ್ಲರೂ ಹೀಗೆ ಇರುವುದಿಲ್ಲವಲ್ಲ? ಲಕ್ಷ್ಮಿಯ ಆಸೆಗೆ ಬಿದ್ದ ಒಬ್ಬಾತನಿಂದ ಅವ್ಯಕ್ತನ ಬಾಳು ಬದಲಾಗುತ್ತದೆ. ಅದು ಹೇಗೆ? ಅದರಿಂದ ಪಾರಾಗಲು ನಾಯಕನಿಗೆ ನೆರವಾಗುವುದು ಯಾರು ಎನ್ನುವುದೇ ಲಂಬೋದರ 2.0 ಕಥಾ ಸಾರ.
ನಾಯಕ ಅವ್ಯಕ್ತನಾಗಿ ಅನಿಲ್ ಶೆಟ್ಟಿ ಅಭಿನಯಿಸಿದ್ದಾರೆ. ಉತ್ತಮ ಕಥೆಗಾರ ಎನ್ನುವುದರಾಚೆ ಹೇಗೆ ಚೆನ್ನಾಗಿ ನಟಿಸಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಭರವಸೆಯ ಕಲಾವಿದರ ಪಟ್ಟಿಯಲ್ಲಿ ಅನಿಲ್ ಶೆಟ್ಟಿ ಹೆಸರನ್ನು ಸೇರಿಸಿಕೊಳ್ಳಬಹುದು. ಅದೇ ರೀತಿ ವೈದ್ಯೆಯಾಗಿ ನಟಿಸಿರುವ ಸಾಚಿ ಬಿಂದ್ರ ಕೂಡ ತಮ್ಮ ಪಾತ್ರದ ಮೂಲಕ ಕಥೆಗೆ ಜೀವಂತಿಕೆ ತುಂಬಿದ್ದಾರೆ. ರಾಘವ್ ಕಶ್ಯಪ್ ಹೆಸರಿನ ಪಾತ್ರದಲ್ಲಿ ಕುನಾಲ್ ಕಪೂರ್ ಅದ್ಭುತ ಅಭಿನಯ ನೀಡಿದ್ದಾರೆ. ನೂರು ದಿನಗಳ ಹ್ಯಾಪಿನೆಸ್ಗೆ ನೂರು ಕೋಟಿ ಬಹುಮಾನ ಘೋಷಿಸುವ ಈತ ಎಷ್ಟು ಉತ್ತಮ ವ್ಯಕ್ತಿ ಎನ್ನುವುದನ್ನು ಪರದೆಯ ಮೇಲೆ ನೋಡುವುದು ಉತ್ತಮ. ಉಳಿದಂತೆ ಮೇಘನಾ ಗಾಂವ್ಕರ್, ರಘು ರಾಮನ ಕೊಪ್ಪ ಮೊದಲಾದ ಕಲಾವಿದರು ತಮ್ಮ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ.
ಈ ಚಿತ್ರದಲ್ಲಿ ಕಲಾವಿದರಿಗೆ ಸ್ಪರ್ಧೆ ನೀಡುವಂತೆ ನಟಿಸಿರುವ ನಿರ್ಜೀವ ಪಾತ್ರಗಳನ್ನು ನೆನಪಿಸಿಕೊಳ್ಳಲೇಬೇಕು. ಒಂದು ಕಡೆ, ಲಂಬೋದರ, ಕೃಷ್ಣ ಮೊದಲಾದ ಎ.ಐ ಪಾತ್ರಗಳಿದ್ದರೆ ಮತ್ತೊಂದೆಡೆ ಹ್ಯೂಮನೈಯ್ಡ್ ರೋಬೋಟ್ ಜಿಯಾ ಅಭಿನಯವನ್ನು ಮರೆಯುವಂತಿಲ್ಲ. ಗಂಭೀರವಾದ ಪಾತ್ರಗಳನ್ನು ಇಟ್ಟುಕೊಂಡೇ ಸಿನೆಮಾ ಪೂರ್ತಿ ಅಲ್ಲಲ್ಲಿ ಹಾಸ್ಯದ ಕಚಗುಳಿ ಇಟ್ಟುಕೊಂಡೇ ಸಾಗುವ ಕಥೆ ಎಲ್ಲರಿಗೂ ಇಷ್ಟವಾಗಬಲ್ಲದು. ವೀರ ಸಮರ್ಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಕೂಡ ಚಿತ್ರದ ಗುಣಮಟ್ಟ ಹೆಚ್ಚಿಸಲು ಕಾರಣವಾಗಿದೆ.
ಆಧುನಿಕ ನಾಗರಿಕತೆಯಲ್ಲಿ ವೈಜ್ಞಾನಿಕ ಯಂತ್ರಗಳ ಬಳಕೆ ಅನಿವಾರ್ಯವಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ನಾವು ನಮಗೇನೇ ಅರಿವಿಲ್ಲದಂತೆ ಯಾರದೋ ಅಧ್ಯಯನಕ್ಕೆ ಬಳಕೆಯಾಗುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ನಾವು ನಿಜಕ್ಕೂ ಕಳೆದುಕೊಳ್ಳುತ್ತಿರುವುದೇನು? ಇದು ನಮಗೂ ಅರ್ಥವಾಗುವುದಿಲ್ಲ. ಆದರೆ ಜಗತ್ತಿಗೆ ನಾವು ತೋರಿಸುವ ಸಂತೋಷ ಯಾವುದು? ನಿಜವಾದ ನಮ್ಮ ಬದುಕಿನ ಸಂತೋಷ ಯಾವುದು? ಸಂಪಾದನೆ ಯಾವುದು? ಮುಂತಾದ ಅಗತ್ಯ ವಿಚಾರಗಳನ್ನು ಅವುಗಳದ್ದೇ ಜಾಡಿನಲ್ಲಿ ಅರಿವಿಲ್ಲದೆ ಸಾಗುವ ಮಂದಿಗೆ ಅರ್ಥವಾಗುವಂತೆ ಹೇಳಿರುವ ಚಿತ್ರ ಇದು. ಹೀಗಾಗಿಯೇ ಇಲ್ಲಿ ಪ್ರತಿಯೊಂದು ಪಾತ್ರಗಳು ಕೂಡ ಯಾರಿಗಾದರು ಒಬ್ಬರಿಗೆ ಹತ್ತಿರವಾಗುತ್ತಾ ಸಾಗುತ್ತದೆ. ಹೊಸ ಮಾದರಿ ಸಬ್ಜೆಕ್ಟ್ ಆಯ್ದುಕೊಂಡಿರುವ ನಿರ್ದೇಶಕ ಸುನಿ ಈ ಬಾರಿ ತಮ್ಮ ಹೊಸತನದಿಂದಲೇ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.





Be the first to comment