ಬರಲಿದೆ ಅಮೃತ ವರ್ಷಿಣಿ’ ಸೀಕ್ವೆಲ್

ರಮೇಶ್ ಅರವಿಂದ್ ಮತ್ತು ಸುಹಾಸಿನಿ ಅಭಿನಯಿಸಿದ ಕನ್ನಡದ  ಚಲನಚಿತ್ರ ‘ಅಮೃತವರ್ಷಿಣಿ’ ಸೀಕ್ವೆಲ್ ಬರಲಿದೆ.

29 ವರ್ಷಗಳ ನಂತರ ‘ಅಮೃತವರ್ಷಿಣಿ 2’ ಚಿತ್ರವನ್ನು ಆರ್. ನವೀನ್ ಮತ್ತು ಬಿ.ಎಸ್. ಸುಧೀಂದ್ರ ಅವರು ನಿರ್ಮಿಸುತ್ತಿದ್ದಾರೆ. ಮೂಲ ಚಿತ್ರದ ಪ್ರಮುಖ ಪಾತ್ರಧಾರಿಗಳ ಜೊತೆಗೆ ಚಿತ್ರದಲ್ಲಿ ಹೊಸ ಕಲಾವಿದರ ತಂಡವೂ ಇರಲಿದೆ.

“ನಾವು ‘ಅಮೃತವರ್ಷಿಣಿ 2’ಗಾಗಿ ರಮೇಶ್ ಅರವಿಂದ್ ಮತ್ತು ಸುಹಾಸಿನಿ ಅವರನ್ನು ಮತ್ತೆ ಕರೆತರುತ್ತಿದ್ದೇವೆ. ಮತ್ತೊಮ್ಮೆ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಹೊತ್ತಿದ್ದಾರೆ. ನಿರ್ದೇಶಕರು ಈ ಕಥೆಯನ್ನು ಮೂಲ ಚಿತ್ರದ ಅಂತಿಮ ದೃಶ್ಯ ಎಲ್ಲಿ ಕೊನೆಗೊಂಡಿತೋ ಅಲ್ಲಿಂದಲೇ ಮುಂದುವರಿಸಲು ಯೋಜಿಸಿದ್ದಾರೆ.  ಮೂಲ ಚಿತ್ರದ ಕೊನೆಯ ದೃಶ್ಯದಿಂದಲೇ ಕಥೆಯನ್ನು ಮುಂದುವರಿಸುವುದು ಒಂದು ವಿಶಿಷ್ಟ ಸೃಜನಶೀಲ ಪ್ರಯಾಣವಾಗಿದ್ದು, ಇದನ್ನು ತೆರೆಯ ಮೇಲೆ ತರಲು ನಾವು ಉತ್ಸುಕರಾಗಿದ್ದೇವೆ’ ಎಂದು ಸುಧೀಂದ್ರ ಹೇಳಿದರು.

‘ಅಮೃತವರ್ಷಿಣಿ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ದೇವಾ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಮಧುರ ಗೀತೆ, ಆಕರ್ಷಕ ಕಥಾಹಂದರ ಸಿನಿಮಾ ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡಿತ್ತು.

ಚಿತ್ರದ ಕಥೆ ಹೇಮಂತ್, ಆತನ ಪತ್ನಿ ವೀಣಾ, ಅವರ ಬಾಲ್ಯದ ಸ್ನೇಹಿತ ಅಭಿಷೇಕ್ ಭಾರದ್ವಾಜ್  ಸುತ್ತ ಸುತ್ತುತ್ತದೆ. ಅಭಿಷೇಕ್‌ನ ಓನ್ ವೇ ಪ್ರೀತಿ ವ್ಯಾಮೋಹದಿಂದಾಗಿ ಕಥೆಯಲ್ಲಿ ದುರಂತ ತಿರುವು ಪಡೆಯುತ್ತದೆ. ಚಿತ್ರದ ಮಾನಸಿಕ ಸಂಘರ್ಷ, ನಾಟಕೀಯ ತಿರುವುಗಳು ‘ರೊಮ್ಯಾಂಟಿಕ್ ಥ್ರಿಲ್ಲರ್’ ಪ್ರಕಾರದ ಚಲನಚಿತ್ರಗಳಿಗೆ ಒಂದು ಉನ್ನತ ಮಾನದಂಡವನ್ನೂ ಸ್ಥಾಪಿಸಿತು.  ಇದು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿತು.

ಛಾಯಾಗ್ರಹಣ, ಸಂಗೀತ ನಿರ್ದೇಶನಕ್ಕಾಗಿ ಅತ್ಯುತ್ತಮ ತಂತ್ರಜ್ಞರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.

—

Be the first to comment

Leave a Reply

Your email address will not be published. Required fields are marked *

Translate »
error: Content is protected !!