ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲಕಿ ಕಾವ್ಯಾ ಮಾರನ್ ಅವರು ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳ ಬದಲಿಗೆ ಸಮಾನತೆ ಮತ್ತು ಪರಸ್ಪರ ಬದ್ಧತೆಯನ್ನು ಆಧರಿಸಿದ ವಿವಾಹವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ನವೆಂಬರ್ 11 ರಂದು ಗ್ರೀಸ್ನಲ್ಲಿ ನಡೆದ ಅದ್ಧೂರಿ ಸಮಾರಂಭವೊಂದರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ಪರಸ್ಪರ ಒಂದೇ ರೀತಿಯ ಪೆಂಡೆಂಟ್ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ವಿವಾಹ ಚರ್ಚೆಯ ವಿಷಯವಾಗಿದ್ದು, ಈ ವಿಶಿಷ್ಟ ಪದ್ಧತಿಯ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಅನಿರುದ್ಧ್-ಕಾವ್ಯಾ, ಪುರೋಹಿತರ ಮಂತ್ರಘೋಷಗಳ ಬದಲಿಗೆ, ಸಮಾನತೆ ಮತ್ತು ಪರಸ್ಪರ ಗೌರವವನ್ನು ಸಾರುವ ‘ಸ್ವಾಭಿಮಾನಿ ವಿವಾಹ’ ) ಪದ್ಧತಿಯ ಮೂಲಕ ಸತಿ-ಪತಿಗಳಾಗಿದ್ದಾರೆ. ಈ ಮದುವೆ ತಮಿಳುನಾಡಿನಲ್ಲಿ ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸಾಮಿ ಅವರು ಆರಂಭಿಸಿದ ‘ಸ್ವಾಭಿಮಾನಿ ಚಳವಳಿ’ಯ ಮೂಲ ಆಶಯದ ವಿವಾಹ ಪದ್ಧತಿಯಾಗಿದೆ. ಜಾತಿ ತಾರತಮ್ಯ, ಸಾಮಾಜಿಕ ಶ್ರೇಣೀಕರಣ, ಪುರುಷಪ್ರಧಾನ ಸಂಪ್ರದಾಯಗಳನ್ನು ವಿರೋಧಿಸಿ ವ್ಯಕ್ತಿಗತ ಘನತೆ, ಸ್ತ್ರೀ-ಪುರುಷ ಸಮಾನತೆಯನ್ನು ಎತ್ತಿಹಿಡಿಯುವುದು ಇದರ ಉದ್ದೇಶವಾಗಿದೆ.
ಈ ಪದ್ಧತಿಯ ಪ್ರಕಾರ ಮದುವೆಗೆ ಪುರೋಹಿತರಾಗಲಿ, ಅಗ್ನಿಸಾಕ್ಷಿಯಾಗಲಿ, ಧಾರ್ಮಿಕ ಆಚರಣೆಗಳಾಗಲಿ ಬೇಕಾಗಿಲ್ಲ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಧು-ವರರು ಪರಸ್ಪರ ಒಪ್ಪಿಗೆಯನ್ನು ಘೋಷಿಸಿ, ಹಾರ, ಉಂಗುರ ಅಥವಾ ಸರವನ್ನು ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಬಹುದು.
ಈ ಸ್ವಾಭಿಮಾನಿ ವಿವಾಹಕ್ಕೆ ಕಾನೂನಿನ ಮಾನ್ಯತೆಯೂ ಇದೆ. 1967ರಲ್ಲಿ ತಮಿಳುನಾಡು ಸರ್ಕಾರ ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ‘ಸೆಕ್ಷನ್ 7-ಎ’ ನ್ನು ಸೇರ್ಪಡೆಗೊಳಿಸಿತು. ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಕೇವಲ ಬಂಧು-ಮಿತ್ರರ ಸಮ್ಮುಖದಲ್ಲಿ ಹಾರ ಅಥವಾ ಉಂಗುರ ಬದಲಾಯಿಸಿಕೊಂಡು ಘೋಷಿಸಿಕೊಳ್ಳುವ ಸ್ವಾಭಿಮಾನಿ ವಿವಾಹಗಳಿಗೆ ಸಂಪೂರ್ಣ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ.
ಈ ಮದುವೆಯಲ್ಲಿ ರಜನಿಕಾಂತ್, ಎಂ.ಕೆ. ಸ್ಟಾಲಿನ್, ಬಂಧು-ಮಿತ್ರರು ಭಾಗವಹಿಸಿದ್ದರು.
—–





Be the first to comment