ಧನ್ವೀರ್ ಗೌಡ ವಿರುದ್ಧ ತಡೆಯಾಜ್ಞೆ ಅಸ್ತ್ರ

ದರ್ಶನ್ ತೂಗುದೀಪ ಅವರು ತಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ತಮ್ಮ ಆಪ್ತ ಹಾಗೂ ನಟ ಧನ್ವೀರ್ ಗೌಡ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ.

ಜೈಲಿನಲ್ಲಿರುವ ವೇಳೆ, ತಮ್ಮ ಕುಟುಂಬ, ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಧನ್ವೀರ್ ನಾಲಿಗೆ ಹರಿಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ದರ್ಶನ್, ತಡೆಯಾಜ್ಞೆ ಅಸ್ತ್ರ ಮೂಲಕ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್ 27ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ಝೈದ್ ಖಾನ್ ಜೈಲಿಗೆ ಭೇಟಿ ನೀಡಿ ಎಲ್ಲ ಬೆಳವಣಿಗೆಗಳನ್ನು ದರ್ಶನ್ ಗಮನಕ್ಕೆ ತಂದಿದ್ದರು. ಇದರಿಂದ ಕೆರಳಿದ ದರ್ಶನ್, “ನಾನು ಜೈಲಿನ ಒಳಗಿರುವಾಗ ನನ್ನ ಹೆಂಡತಿ, ಮಕ್ಕಳ ಬಗ್ಗೆ ಮಾತನಾಡಲು ಇವನ್ಯಾರು? ದಮ್ಮು, ತಾಕತ್ ಇದ್ದರೆ ನಾನು ಹೊರಗೆ ಬಂದ ಮೇಲೆ ನನ್ನ ಮುಂದೆ ಮಾತನಾಡಲಿ” ಎಂದು ಝೈದ್ ಖಾನ್ ಮೂಲಕ ಕಟುವಾದ ಸಂದೇಶ ರವಾನಿಸಿದ್ದರು.

ಧನ್ವೀರ್ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ದರ್ಶನ್, ಅವರ ಪತ್ನಿ ಮತ್ತು ಮಗನ ಹೆಸರನ್ನು ಬಳಸಿ ಯಾವುದೇ ಸುಳ್ಳು ಅಥವಾ ನಿಂದನಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ಬಂಧಿಸಲು  ಕಾನೂನಾತ್ಮಕ ತಡೆಯಾಜ್ಞೆ ತರಲಾಗುತ್ತಿದೆ ಎನ್ನಲಾಗಿದೆ.

ದರ್ಶನ್ ಜೈಲಿನಲ್ಲಿದ್ದಾಗ ಅವರ ಕೋರ್ಟ್ ವೆಚ್ಚ ಹಾಗೂ ಇತರ ಕಾನೂನು ಪ್ರಕ್ರಿಯೆಗಳಿಗಾಗಿ ಹಣ ಸಂಗ್ರಹಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. 10 ಕೋಟಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಧನ್ವೀರ್,  ವಿಜಯಲಕ್ಷ್ಮಿ ಆಪ್ತರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ.

ಇತ್ತೀಚೆಗೆ ಧನ್ವೀರ್ ಅವರದ್ದು ಎನ್ನಲಾದ ಆಡಿಯೋ ತುಣುಕುಗಳು ವೈರಲ್ ಆಗಿದೆ.  ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರು ತಮಗೆ ಧನ್ವೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರ್.ಆರ್. ನಗರ ಠಾಣೆಯಲ್ಲಿ ದೂರು ನೀಡಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!