‘ಭಾವಾಂತರ’ ಅಕ್ಟೋಬರ್ ಗೆ ತೆರೆಗೆ

ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ,  ಮನೋಜ್ ಕುಮಾರ್  ಸಹಯೋಗದಲ್ಲಿ ಮೂಡಿಬರುತ್ತಿರುವ  ಬಹುನಿರೀಕ್ಷಿತ ‘ಭಾವಾಂತರ’ ಚಿತ್ರವನ್ನು ಅಕ್ಟೋಬರ್ ವೇಳೆಗೆ ತೆರೆಗೆ ತರಲು ಚಿತ್ರತಂಡ ಯೋಜಿಸಿದೆ.

ಕಾರ್ತಿಕ್ ಶರ್ಮಾ  ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ.  ಅಲ್ಲದೆ ಚಿತ್ರದ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ  ಹೊತ್ತಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಅವರಿಗೆ ಜೋಡಿಯಾಗಿ ತನ್ವಿ ರಾವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮಂಗಳಮುಖಿಯರ ನೈಜ ಬದುಕು, ಅವರು ಸಮಾಜದಲ್ಲಿ ಎದುರಿಸುವ ಸವಾಲುಗಳು ಹಾಗೂ ಅವರ ಸೂಕ್ಷ್ಮ ಭಾವನಾತ್ಮಕ ಅನುಭವಗಳ ಸುತ್ತ  ಸಿನಿಮಾದ ಕಥಾಹಂದರ ಸಾಗಲಿದ್ದು, ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ  100ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅನುಭವ ಹೊಂದಿರುವ ಕಾರ್ತಿಕ್ ಶರ್ಮಾ  ‘ಕಿಕ್ ಮೀಡಿಯಾ’ ಮೂಲಕ  ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಸಲುವಾಗಿ  ಐನ್‌ಫ್ಯಾಕ್ ಸ್ಟುಡಿಯೋಸ್‌ನ ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್ ಅವರೊಂದಿಗೆ ಕೈಜೋಡಿಸಿದ್ದಾರೆ.

ಚಿತ್ರದ ಆಡಿಯೋ ಹಕ್ಕುಗಳನ್ನು ‘ಹೊಂಬಾಳೆ ಮ್ಯೂಸಿಕ್’ ಸಂಸ್ಥೆ  ಪಡೆದುಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ  ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಹಾಗೂ ಟ್ರೇಲರ್‌  ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರತಂಡ ತಿಳಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!