ಕುಲವಧು, ನಮ್ಮನೆ ಯುವರಾಣಿ, ಪ್ರೇಮಲೋಕ, ಸೇವಂತಿ ಶಾಂತಂ ಪಾಪಂ ಸೇರಿದಂತೆ, ಸಧ್ಯ ಪವಿತ್ರ ಬಂಧನ, ಹೀಗೆ ಹಲವು ಧಾರಾವಾಹಿಗಳಿಗೆ ಕಥೆ , ಚಿತ್ರಕಥೆ ಬರೆದಿರುವ, ಬರೆಯುತ್ತಿರುವ ಎಂ ವಿದ್ಯಾಲಕ್ಷ್ಮಿ ಪ್ರಹ್ಲಾದ್ “ಘಮ” ಎಂಬ ಕಿರುಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕಿಯಾಗಿದ್ದಾರೆ. “ಘಮ” ಕಿರುಚಿತ್ರಕ್ಕೆ “ಪರಿಮಳಕ್ಕೆ ಪರವಶ” ಎಂಬ ಅಡಿಬರಹವಿದೆ. ಹಳ್ಳಿಯ ಮುಗ್ಧ ಬಾಲೆ ಹಾಗೂ ಒಂದು ಘಮಘಮಿಸುವ ಸೋಪಿನ ನಡುವೆ ಹೆಣೆದಿರುವ ಕಥೆಯಿದು. ಹದಿನಾಲ್ಕು ನಿಮಿಷಗಳಲ್ಲೇ ಈ ಕಿರುಚಿತ್ರ ಎಲ್ಲರ ಗಮನ ಸೆಳೆಯುತ್ತದೆ. ಆದರ್ಶ ಅಯ್ಯಂಗಾರ್ ಅವರು ಶ್ರೀಕೃಷ್ಣ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಅನಾವರಣ ಸಮಾರಂಭ ನೆರವೇರಿತು. ಹೆಸರಾಂತ ಲೇಖಕ ಹಾಗೂ ಸಂಪಾದಕರಾದ ಜೋಗಿ, ಭಾವನ ಬೆಳಗೆರೆ, ಶ್ರೀವಿದ್ಯಾ ರಾಜ್ ಹಾಗೂ ವೀರ್ ಸಮರ್ಥ್ ಈ ಕಿರುಚಿತ್ರವನ್ನು ಬಿಡುಗಡೆ ಮಾಡಿದರು. ಕಿರುಚಿತ್ರದ ವೀಕ್ಷಣೆಯ ನಂತರ ಗಣ್ಯರು ಪ್ರೋತ್ಸಾಹದ ನುಡಿಗಳನ್ನಾಡಿ, ಕಿರುಚಿತ್ರಕ್ಕೆ ಹಾಗೂ ತಂಡಕ್ಕೆ ಯಶಸ್ಸನ್ನು ಕೋರಿದರು.

ನಿರ್ದೇಶಕಿ ಎಂ ವಿದ್ಯಾಲಕ್ಷ್ಮಿ ಪ್ರಹ್ಲಾದ್ ಮಾತನಾಡಿ, ಇದು ನನ್ನ ನಿರ್ದೇಶನದ ಮೊದಲ ಹೆಜ್ಜೆ, ಕಥೆ ಕೇಳಿದ ತಕ್ಷಣ ನಿರ್ಮಾಪಕ ಆದರ್ಶ ಅಯ್ಯಂಗಾರ್ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದರು. ರಕ್ಷಿತ್ ತೀರ್ಥಹಳ್ಳಿ, ನಿರ್ದೇಶನದಲ್ಲಿ ನನ್ನ ಗುರುಗಳು. ಕಥೆಗಾರರು ಕಟ್ಟಿದ ಕಥೆಯನ್ನು ಛಾಯಾಗ್ರಾಹಕ ಶಾಂತಿ ಸಾಗರ್ ಅದ್ಭುತವಾಗಿ ಛಾಯಾಗ್ರಹಣ ಮಾಡಿದ್ದಾರೆ. ಇದಕ್ಕೆ ಡಬ್ಬಿಂಗ್ ಮಾಡಿಲ್ಲ. ಸ್ಥಳದಲ್ಲಿ ಸಿಂಕ್ ಸೌಂಡ್ ಮಾಡಲಾಗಿದೆ. ನನ್ನ ಬಾಲ್ಯದ ಕೆಲವು ಘಟನೆಗಳೆ ಈ ಕಥೆ ಬರೆಯಲು ಸ್ಪೂರ್ತಿ. ಆದರ್ಶ ಅಯ್ಯಂಗಾರ್, ಅರ್ಪಿತಾ ಮೋಹಿತೆ, ವಜ್ರ ಭಾರ್ಗವಿ, ಪ್ರಜ್ಞಾ ಶೆಟ್ಟಿ, ಪಾತಿಮಾ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಕಿರುಚಿತ್ರ ನಿರ್ಮಾಣವಾಗಿದೆ ಎಂದರು. ನನ್ನ ಮಗಳು ಗೌರಿ ಮನೋಹರಿ “ಘಮ” ಶೀರ್ಷಿಕೆ ನೀಡಿದ್ದು ಎಂದು ನಿರ್ದೇಶಕಿ ವಿದ್ಯಾಲಕ್ಷ್ಮೀ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ನಟ, ನಿರ್ಮಾಪಕ ಆದರ್ಶ್ ಅಯ್ಯಂಗಾರ್ ಮಾತನಾಡಿ, ವಿದ್ಯಾಲಕ್ಷ್ಮೀ ಅವರು ಎಂಟು ತಿಂಗಳ ಹಿಂದೆ ಈ ಕಥೆ ಹೇಳಿದ್ದರು. ಮನಸ್ಸಿಗೆ ತುಂಬ ನಾಟಿದ ಕಥೆ, 1990 ರ ಸೊಗಡನ್ನು ಕಿರುಚಿತ್ರ ಮಾಡುವುದು ಸವಾಲಿನ ಕೆಲಸವಾಗಿತ್ತು. ಇದು 14 ನಿಮಿಷಗಳ ಕಿರುಚಿತ್ರ. ಚಿಕ್ಕದಾದರೂ ಚೊಕ್ಕವಾಗಿ ಮಾಡಬೇಕು ಎನ್ನುವ ಉದ್ದೇಶ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಾಲ್ಕು ದಿನಗಳ ಕಾಲ ಮಲೆನಾಡಿನ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.
ನಟಿ ಪ್ರಜ್ಞಾ ಶೆಟ್ಡಿ ಮಾತನಾಡಿ, ಕಥೆ ಇಷ್ಟವಾಯಿತು. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.
ಬಾಲ ಕಲಾವಿದೆ ವಜ್ರ ಭಾರ್ಗವಿ, ಕಲಾವಿದೆ ಫಾತಿಮಾ, ಸಹಕಾರ ನೀಡಿರುವ ರಕ್ಷಿತ್ ತೀರ್ಥಹಳ್ಳಿ ಹಾಗೂ ಕಿರುಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.






Be the first to comment