ಜೀ ಕನ್ನಡ ಪ್ರೇಕ್ಷಕರಿಗಾಗಿ ‘ಹಳ್ಳಿ ಪವರ್ ರಿಲೋಡೆಡ್’ ಎಂಬ ನೂತನ ರಿಯಾಲಿಟಿ ಶೋವನ್ನು ಆಗಸ್ಟ್ 8ರಿಂದ ಪರಿಚಯಿಸಲು ಸಜ್ಜಾಗಿದೆ.
ಗ್ರಾಮೀಣ ಕರ್ನಾಟಕದ ಸಂಸ್ಕೃತಿ, ಬದುಕಿನ ಸೊಗಡು ಮತ್ತು ಸವಾಲುಗಳನ್ನು ಪರಿಚಯಿಸುವ ಈ ಕಾರ್ಯಕ್ರಮ ಆತ್ಮವಿಶ್ವಾಸ, ಒಗ್ಗಟ್ಟು ಹಾಗೂ ಜೀವನದ ಹೊಸ ಅನುಭವಗಳನ್ನು ಅನಾವರಣಗೊಳಿಸಲಿದೆ. ಆಗಸ್ಟ್ 8ರಿಂದ ಈ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30 ಗಂಟೆಗೆ ಪ್ರಸಾರವಾಗಲಿದೆ.
ರ್ನಾಟಕದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಅವರು ಹಳ್ಳಿ ಪವರ್ ಶೋ ನ ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸ್ನೇಹ ಹೆಚ್, ಬಿಬಿ ಹಾಜಿರಾ, ಏಂಜೆಲೀನ್, ರಿಗ್ಮ್ಯಾ ರಾಜಶ್ರೀ, ದರ್ಶಿನಿ ಗೌಡ, ಪೂಜಾ ಚಂದ್ರಶೇಖರ್, ಅನಿಷಾ ಲಕ್ಷ್ಮಣ್, ಸುಷ್ಮಾ ತೊಗರೆ, ತೇಜಸ್ವಿನಿ, ಅಂಕಿತ ದೇವ್, ಪೂರ್ವಿಕ ಆರ್ ಕೆ, ಚಿತ್ರಶ್ರೀ, ಪೂರ್ವ ವೈ, ರಚನಾ, ನಿಖಿತಾ ಸ್ವಾಮಿ, ನಿವೇದಿತಾ ರೈ ಹೀಗೆ ಸಿಟಿಯಲ್ಲಿ ಬೆಳೆದ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸ್ಪರ್ಧಿಗಳಿಗೆ ಟೆಲಿವಿಷನ್, ಮೊಬೈಲ್, ಇಂಟರ್ನೆಟ್ ಸೇರಿದಂತೆ ಯಾವುದೇ ಐಷಾರಾಮಿ ಸೌಲಭ್ಯಗಳು ಸಿಗುವುದಿಲ್ಲ. ಸ್ಪರ್ಧಿಗಳು ಹಳ್ಳಿಯ ಸರಳ ಜೀವನಕ್ಕೆ ಒಗ್ಗಬೇಕು. ಕುಟುಂಬದವರಿಂದ ದೂರವಿರಬೇಕು. ಕೃಷಿ ಕೆಲಸ, ಜಾನುವಾರುಗಳ ಆರೈಕೆ, ಅಡುಗೆ, ಮನೆಯ ಜವಾಬ್ದಾರಿಗಳು, ಹಳ್ಳಿಯ ದಿನನಿತ್ಯದ ಕೆಲಸಗಳು ಹೀಗೆ ಪ್ರತಿಯೊಂದು ಸವಾಲೂ ಸ್ಪರ್ಧಿಗಳ ದೈಹಿಕ ಸಾಮರ್ಥ್ಯ ಹಾಗು ಮಾನಸಿಕ ಸ್ತಿಮಿತತೆಯನ್ನು ಪರೀಕ್ಷಿಸಲಿದೆ.
ಹೊಸ ಬದುಕಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಸ್ಪರ್ಧಿಗಳ ನಡುವಿನ ಸ್ನೇಹ, ಎದುರಾಗುವ ಸವಾಲುಗಳು, ಗೆಲುವು-ಸೋಲು, ಆತ್ಮವಿಶ್ವಾಸ ಹಾಗೂ ಅವರ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಲಿದ್ದಾರೆ. ‘ಹಳ್ಳಿ ಪವರ್’ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಗುರಿಯೊಂದಿಗೆ ಪ್ರತಿಯೊಬ್ಬ ಸ್ಪರ್ಧಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದು, ಅವರ ರೋಚಕ ಪಯಣ ಮನರಂಜನೆಯ ಜೊತೆಗೆ ಪ್ರೇಕ್ಷಕರಿಗೆ ಸ್ಫೂರ್ತಿಯನ್ನೂ ನೀಡಲಿದೆ.
—–




Be the first to comment