‘ಹಣವೇ ಮುಖ್ಯವಾಗಿದ್ದರೆ ₹1.5 ಕೋಟಿ ಪಡೆದು ಸುಮ್ಮನಾಗುತ್ತಿದ್ದೆ’ ಎಂದು ‘ಕರಾವಳಿ’ ಸಿನಿಮಾ ನಟ ಪ್ರಜ್ವಲ್ ದೇವರಾಜ್ ಪ್ರತಿಕ್ರಿಯಿಸಿದ್ದಾರೆ.
‘ಹಣವೇ ಮುಖ್ಯವಾಗಿದ್ದರೆ 1.5ಕೋಟಿ ರೂಪಾಯಿಯನ್ನು ಒಂದು ವರ್ಷ ಅವರ ಬಳಿ ಬಿಡುತ್ತಿರಲಿಲ್ಲ. ಕಳೆದ ವರ್ಷವೇ ಹಣ ಪಡೆದುಕೊಂಡು ಬಿಡುತ್ತಿದ್ದೆ. ವಿವಾದಕ್ಕೆ ಕೇವಲ ಸಂಭಾವನೆ ಕಾರಣವಲ್ಲ. ಹಲವು ವಿಚಾರಗಳು ಕಾರಣವಾಗಿವೆ ” ಎಂದು ಹೇಳಿದ್ದಾರೆ.
‘ನಿರ್ದೇಶಕ ಗುರುದತ್ ಗಾಣಿಗ ಮತ್ತು ತಮ್ಮ ನಡುವಿನ ಸಂಬಂಧ ಕೆಲವು ತಿಂಗಳ ಹಿಂದೆಯೇ ಹದಗೆಟ್ಟಿತ್ತು. ನನ್ನ ಹಣ ಕೊಟ್ಟರೆ ಡಬ್ಬಿಂಗ್ ಮುಗಿಸುತ್ತೇನೆ ಎಂದು ಹೇಳಿದ್ದೆ. ಟ್ರೈಲರ್‌ಗಾಗಿ ಡಬ್ಬಿಂಗ್ ಮಾಡಲು ನಾನು ಸಿದ್ಧನಿದ್ದೆ. ಮೊದಲು ಟ್ರೈಲರ್ ಡಬ್ಬಿಂಗ್ ಮುಗಿಸಿ ನಂತರ ಉಳಿದ ವಿಚಾರ ನೋಡೋಣ ಎಂದಿದ್ದರೂ ನಾನು ಒಪ್ಪಿಕೊಳ್ಳುತ್ತಿದ್ದೆ” ಎಂದು ಅವರು ತಿಳಿಸಿದ್ದಾರೆ.
‘ಸಾಮಾನ್ಯವಾಗಿ ಸಿನಿಮಾಗಳಿಗೆ ಹೆಚ್ಚು ಒಪ್ಪಂದ ಮಾಡಿಕೊಳ್ಳುವುದಿಲ್ಲ. ಪರಸ್ಪರ ನಂಬಿಕೆಯ ಮೇಲೆ ಕೆಲಸ ಮಾಡುತ್ತಿದ್ದೆವು. ಆದರೆ ‘ಕರಾವಳಿ’ ನಂತರ ಒಪ್ಪಂದದ ಮಹತ್ವ ಅರ್ಥವಾಗಿದೆ. ಈ ವಿವಾದದ ವೇಳೆ ಚಿತ್ರರಂಗದ ಹಲವು ಗಣ್ಯರು ತಮ್ಮನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ರಿಷಬ್ ಶೆಟ್ಟಿ, ಧ್ರುವ ಸರ್ಜಾ, ರಮ್ಯಾ, ರಕ್ಷಿತಾ, ನೆನಪಿರಲಿ ಪ್ರೇಮ್, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರು ಕರೆ ಮಾಡಿ ಮಾತನಾಡಿದ್ದಾರೆ’ ಎಂದು ಪ್ರಜ್ವಲ್ ಹೇಳಿದ್ದಾರೆ.
ಯಾವುದೇ ನಟನ ಒಪ್ಪಿಗೆ ಇಲ್ಲದೆ ಅವರ ಪಾತ್ರಕ್ಕೆ ಮತ್ತೊಬ್ಬರಿಂದ ಧ್ವನಿ ನೀಡಿಸುವಂತಿಲ್ಲ. ಅದು ನಟನ ಹಕ್ಕಿನ ವಿಚಾರ. ನಟನಿಂದ ಎನ್‌ಒಸಿ ಪಡೆದ ಬಳಿಕವೇ ಬೇರೆಯವರಿಂದ ಡಬ್ಬಿಂಗ್ ಮಾಡಿಸಬಹುದು. ಕೆಲವರು ಸಿನಿಮಾದ ವಿರುದ್ಧ ಕಾನೂನು ಹೋರಾಟ ನಡೆಸುವಂತೆ ಸಲಹೆ ನೀಡಿದ್ದರು. ಬಿಡುಗಡೆಗೆ ತಡೆಯಾಜ್ಞೆ ತರುವ ನಿರ್ಧಾರವನ್ನು ತಾವು ತೆಗೆದುಕೊಳ್ಳಲಿಲ್ಲ. ನ್ಯಾಯ ಮತ್ತು ನಿಯಮ ನನ್ನ ಪರವಾಗಿದ್ದರೂ ಸಿನಿಮಾಗೆ ಸಮಸ್ಯೆಯಾಗಬೇಕು ಎಂದು ನಾನು ಬಯಸುವುದಿಲ್ಲ. ಸಿನಿಮಾ ಉತ್ತಮವಾಗಿ ಯಶಸ್ಸು ಕಾಣಬೇಕು ಎಂಬುದೇ ನನ್ನ ಆಶಯ” ಎಂದಿದ್ದಾರೆ ಪ್ರಜ್ವಲ್.
ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಹಾಗೂ ಸಂಪದಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಅವರಿಂದ ಡಬ್ಬಿಂಗ್ ಮಾಡಿಸಿಲ್ಲ ಎಂಬ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.





Be the first to comment