ಭಾರತೀಯ ಚಿತ್ರರಂಗದ ಜನಪ್ರಿಯ ಜೋಡಿ ನಾಗಾರ್ಜುನ ಮತ್ತು ಟಬು 28 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ.
ನಾಗಾರ್ಜುನ ಅವರ 100ನೇ ಚಿತ್ರಕ್ಕಾಗಿ ಇವರಿಬ್ಬರು ಮತ್ತೆ ಒಂದಾಗುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಕಿಂಗ್ 100’ ಎಂದು ಹೆಸರಿಡಲಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ರಾ. ಕಾರ್ತಿಕ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾದಲ್ಲಿ ಟಬು ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಾಗಾರ್ಜುನ ಎದುರಾಳಿಯಾಗಿ ಟಬು ಅಬ್ಬರಿಸಲಿದ್ದಾರೆ. ಈ ಮೊದಲು ಕೂಡ ಟಬು ಅವರು ನೆಗೆಟಿವ್ ರೋಲ್ಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.
1998ರಲ್ಲಿ ರಿಲೀಸ್ ಆದ ‘ಆವಿಡಾ ಮಾ ಆವಿಡೇ’ ಚಿತ್ರದಲ್ಲಿ ನಾಗಾರ್ಜುನ ಮತ್ತು ಟಬು ಒಟ್ಟಿಗೆ ನಟಿಸಿದ್ದರು. ಕಾಮಿಡಿ ಡ್ರಾಮಾ ಶೈಲಿಯ ಈ ಚಿತ್ರದ ಬಳಿಕ ಇಬ್ಬರೂ ಒಟ್ಟಿಗೆ ನಟಿಸಿರಲಿಲ್ಲ.
ಕೃಷ್ಣ ವಂಶಿ ನಿರ್ದೇಶನದ 1996ರ ‘ನಿನ್ನೆ ಪೆಳ್ಳಾಡತಾ’ ಸಿನಿಮಾ ತೆಲುಗು ಚಿತ್ರರಂಗದ ಐಕಾನಿಕ್ ಲವ್ ಸ್ಟೋರಿಗಳಲ್ಲಿ ಒಂದಾಗಿದೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ನಾಗಾರ್ಜುನ-ಟಬು ಕೆಮಿಸ್ಟ್ರಿ ಸೂಪರ್ ಹಿಟ್ ಆಗಿತ್ತು.
1995ರಲ್ಲಿ ರಿಲೀಸ್ ಆದ ‘ಸಿಸಿಂದ್ರಿ ’ ಚಿತ್ರದಲ್ಲಿ ನಾಗಾರ್ಜುನ ಅವರ ಮಗ ಅಖಿಲ್ ಅಕ್ಕಿನೇನಿ ಬಾಲನಟನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಟಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಗಾರ್ಜುನ ಹಾಗೂ ಟಬು ಒಟ್ಟಿಗೆ ಕಾಣಿಸಿಕೊಂಡ ಮೊದಲ ಸಿನಿಮಾ ಇದಾಗಿತ್ತು.
—-





Be the first to comment