ನವಿಲು ಗರಿಗಳನ್ನು ಬಳಸಿ ರೀಲ್ಸ್ ಮಾಡಿದ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಕಿಶನ್ ಹಾಗೂ ನಿವೇದಿತಾ ಗೌಡ ಅವರ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.
ರೀಲ್ಸ್ ಮಾಡಲು ನವಿಲುಗರಿ ಬಳಕೆ ಮಾಡುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನಿವೇದಿತಾ ಗೌಡ ಹಾಗೂ ಕಿಶನ್ ಇಬ್ಬರೂ ವಿಡಿಯೋ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
ವನ್ಯಜೀವಿ ವಸ್ತುಗಳನ್ನು ಅಥವಾ ಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಮತ್ತು ಅದರಿಂದ ವಿಡಿಯೋ ಮಾಡುವುದು ಕಾನೂನು ಬಾಹಿರ. ಇದು ತಪ್ಪು ತಿಳುವಳಿಕೆಯಿಂದ ಮಾಡಿದ ವಿಡಿಯೋ. ಬೇರೆ ಯಾರೂ ಈ ರೀತಿಯ ವನ್ಯಜೀವಿ ವಸ್ತುಗಳನ್ನು ಬಳಸಿ ವಿಡಿಯೋ ಮಾಡಬೇಡಿ. ತಮ್ಮ ವಿರುದ್ಧ ಸದ್ಯ ನಡೆಯುತ್ತಿರುವ ಅರಣ್ಯ ಇಲಾಖೆಯ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ನಿವೇದಿತಾ ಗೌಡ ಅವರು ತಿಳಿಸಿದ್ದಾರೆ.
‘ವಿಡಿಯೋ ಮಾಡುವ ವೇಳೆ ಇದು ಕಾನೂನುಬಾಹಿರ ಎಂಬ ಮಾಹಿತಿ ನಮಗೆ ಇರಲಿಲ್ಲ. ಹಲವು ತಂಡಗಳು ಸೇರಿ ಈ ಕೊಲಾಬರೇಷನ್ ವಿಡಿಯೋ ಮಾಡಿದ್ದೆವು. ಬಳಸಿದ ನವಿಲು ಗರಿಗಳನ್ನು ಬಾಡಿಗೆಗೆ ಪಡೆದಿದ್ದೆವು’ ಎಂದು ಕಿಶನ್ ವಿಡಿಯೋ ಬಿಡುಗಡೆ ಮಾಡಿ ತಪ್ಪೊಪ್ಪಿಕೊಂಡಿದ್ದಾರೆ.
‘ನಾನು ಒಬ್ಬ ಇನ್‌ಫ್ಲುಯೆನ್ಸರ್ ಆಗಿರುವುದರಿಂದ ಜನರಿಗೆ ತಪ್ಪು ಸಂದೇಶ ಹೋಗಬಾರದು. ಅದಕ್ಕಾಗಿ ವಿಡಿಯೋವನ್ನು ಅಳಿಸಿದ್ದೇನೆ. ಯಾರೂ ನವಿಲು ಗರಿಗಳನ್ನು ಬಳಸಬೇಡಿ’ ಎಂದು ಮನವಿ ಮಾಡಿದ್ದಾರೆ.
‘ಹೇ ನವಿಲೇ’ ಹಾಡಿಗೆ ನವಿಲು ಗರಿಗಳನ್ನು ಧರಿಸಿ ರೀಲ್ಸ್ ಮಾಡಿದ್ದ ಕಿಶನ್ ಹಾಗೂ ನಿವೇದಿತಾ ಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ರಾಷ್ಟ್ರೀಯ ಪಕ್ಷಿ ನವಿಲು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ವಿಶೇಷ ರಕ್ಷಣೆ ಹೊಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಚರ್ಚೆಗೆ ಗ್ರಾಸವಾಗಿತ್ತು.
—-





Be the first to comment