ಕಾಮನ್‌ ಮ್ಯಾನ್

ಕೆರೆಬೇಟೆ ಹುಡುಗ ಈಗ ‘ಕಾಮನ್‌ ಮ್ಯಾನ್’

ಕೆರೆಬೇಟೆ ಚಿತ್ರದ ಮೂಲಕ ಗುರುತಿಸಿಕೊಂಡ ಗೌರಿ ಶಂಕರ್ ಈ ಬಾರಿ ಹಿರಿಬೇಟೆಯೊಂದಿಗೆ ಬಂದಿದ್ದಾರೆ. ಯಾಕೆಂದರೆ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ 106 ನೇ ಚಿತ್ರ ‘ಕಾಮನ್‌ ಮ್ಯಾನ್’ ಗೆ ನಾಯಕರಾಗಿದ್ದಾರೆ.

ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ “ಈ ಚಿತ್ರಕ್ಕೆ ‘ನಾನೇ CM’ ಅಂತ ಹೆಸರಿಡಲು ಬಯಸಿದ್ದೆ. ಆದರೆ ಚಿತ್ರದ ನಾಯಕ ಸೇರಿದಂತೆ ಬಹುತೇಕ ಮಂದಿ ‘ಕಾಮನ್ ಮ್ಯಾನ್’ ಅಂತ ಇಡೋಣ ಅಂತ ಹೇಳಿದರು. ನಾನು ಮೊದಲು ‘ಸಮುದಾಯ’ ತಂಡದಲ್ಲಿದ್ದೆ. ರಂಗಭೂಮಿ ನಟ. ಆದರೆ ಸಾಕಷ್ಟು ಸಮಯದ ಬಳಿಕ ಸಿನೆಮಾಗಾಗಿ ಬಣ್ಣ ಹಚ್ಚಿದ್ದೇನೆ. ಸಾಮಾನ್ಯ ಮನುಷ್ಯ ಮುಖ್ಯಮಂತ್ರಿ ಆಗಲು ಹೊರಟಾಗ ಏನಾಗುತ್ತದೆಂದು ಚಿತ್ರದಲ್ಲಿ ತೋರಿಸಲಾಗಿದೆ” ಎಂದರು.

ಬಳಿಕ ಮಾತನಾಡಿದ ನಿರ್ದೇಶಕ ಓಂ ಸಾಯಿ ಪ್ರಕಾಶ್ “ರೌಡಿ MLA ನಿರ್ಮಾಪಕರ ಬಳಿಕ ನನಗೆ ಮೆಚ್ಚುಗೆ ಆಗಿರುವ ನಿರ್ಮಾಪಕರು ಇವರು” ಎಂದರು. ಜನವರಿಯಲ್ಲಿ ಶುರು ಮಾಡಿದ ಚಿತ್ರದ ಮೊದಲ ಪ್ರತಿ ರೆಡಿ ಆಗಿದೆ. ಬೆಂಗಳೂರು ಚಿತ್ರೋತ್ಸವಕ್ಕೆ ಕೆರೆಬೇಟೆ ಚಿತ್ರವನ್ನು ಆಯ್ಕೆ ಮಾಡಿದ್ದು ನಮ್ಮದೇ ತಂಡ. ಗೌರಿ ಶಂಕರ್ ನಟನೆ ಆಗಲೇ ನನಗೆ ಇಷ್ಟವಾಗಿತ್ತು ಎಂದು ಸಾಯಿ ಹೇಳಿದರು.

ಕಾಮನ್‌ ಮ್ಯಾನ್

ಈ ಕತೆಗೂ ತಮಿಳಿನ ‘ಮುದಲ್ವನ್’ ಚಿತ್ರಕ್ಕೂ ಸಂಬಂಧ ಇಲ್ಲ. ಇಲ್ಲಿ ಲಾಯರ್ ಆಗಿರುವ ವ್ಯಕ್ತಿ ಮುಖ್ಯಮಂತ್ರಿ ಆಗುವ ಪಾತ್ರ ಇದೆ ಎಂದು ನಿರ್ದೇಶಕ ಸಾಯಿ ಪ್ರಕಾಶ್ ಸ್ಪಷ್ಟ ಪಡಿಸಿದರು.

ನಾಯಕ ನಟ ಗೌರಿಶಂಕರ್ ಮಾತನಾಡಿ, “ತುಂಬ ಕಡಿಮೆ ಅವಧಿಯಲ್ಲಿ ಮಾಡಿದ ಈ ಚಿತ್ರ ದೊಡ್ಡ ಅನುಭವ ತಂದು ಕೊಟ್ಟಿದೆ” ಎಂದರು. ಮೊದಲು ಸೀನಿಯರ್ ಡೈರೆಕ್ಟರ್ ಅಂತ ಭಯ ಆಗಿತ್ತು. ಆದರೆ ಕಥೆ ಕೇಳಿದ ದಿನವೇ ಕಥೆಯೊಂದಿಗೆ ನಿರ್ದೇಶಕರು ಕೂಡ ಹತ್ತಿರವಾದರು. ಸಿನಿಮಾವನ್ನು ತುಂಬಾ ಯೋಜನಾ ಬದ್ಧವಾಗಿ ಮಾಡಿದ್ದಾರೆ ಎಂದರು. ನನಗೆ ನಿಜ ಜೀವನದಲ್ಲಿಯೂ ವಕೀಲರು ಮತ್ತು ರಾಜಕಾರಣಿಗಳು ಆಪ್ತರು. ಇಲ್ಲಿಯೂ ಅಂಥದೇ ಪಾತ್ರ ದೊರಕಿರುವುದು ಖುಷಿಯಾಗಿದೆ ಎನ್ನುವುದು ಗೌರಿಶಂಕರ್ ಮಾತಾಗಿತ್ತು.

ಚಿತ್ರದ ಛಾಯಾಗ್ರಾಹಕ ಜಿ.ಜೆ ಕೃಷ್ಣ ಅವರು “ಥ್ರಿಲ್ಲರ್ ಮಂಜು ಸಾಹಸದಲ್ಲಿ ನಾಯಕ ಬೆಂಕಿ ಮಧ್ಯೆ ನಡೆಸಿದ ಸಾಹಸ ಮೆಚ್ಚುವಂಥದ್ದಾಗಿದೆ” ಎಂದರು.

ಸಂಗೀತ ನಿರ್ದೇಶಕ ವಿನಯ್ ಚಂದ್ರ ಮಾತನಾಡಿ ನಾನು ಹಂಸಲೇಖ ಅವರಿಗೆ ಅಸಿಸ್ಟೆಂಟ್ ಆಗಿದ್ದೆ. ಆಗಲೇ ಸಾಯಿ ಪ್ರಕಾಶ್ ಅವರ ಕೆಲಸದ ರೀತಿ ಇಷ್ಟವಾಗಿತ್ತು. ಈಗ ಅವರೊಂದಿಗೆ ಕೆಲಸ ಮಾಡಲು ಅವಕಾಶ ದೊರಕಿದೆ. ಇದರ ಹಾಡುಗಳನ್ನು ಬಾಬಾ ಸೈಗಲ್, ಜಾವೇದ್ ಅಲಿ, ಕೈಲಾಶ್ ಖೇರ್ ನಟಿ ಚೈತ್ರ ಅಚಾರ್ ಹಾಡಿದ್ದಾರೆ ಎಂದರು. ಈ ಚಿತ್ರದ ನಾಯಕಿಯಾಗಿ ನವನಟಿ ಸೋನಲ್ ಅಭಿನಯಿಸಿದ್ದಾರೆ. ಸಿನಿಮಾ ಮುಂದಿನ ಒಂದೆರಡು ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆ ಮಾಡಲಾಗಿದೆ.

ಕಾಮನ್‌ ಮ್ಯಾನ್

Be the first to comment

Leave a Reply

Your email address will not be published. Required fields are marked *

Translate »
error: Content is protected !!