ಸಂತೋಷ್ ಕುಮಾರ್ ನಿರ್ಮಾಣದ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರ ಫೆಬ್ರವರಿ ತಿಂಗಳಿನಲ್ಲಿ ತೆರೆಗೆ ಬರಲಿದೆ.
ಮಾಧ್ಯಮಗಳ ಜೊತೆಗೆ ನಿರ್ಮಾಪಕರು ಈ ವಿಷಯವನ್ನು ತಿಳಿಸಿದ್ದಾರೆ. ‘ಯೋಗರಾಜ್ ಭಟ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿ ಮೂಡಿ ಬರುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.
ಯೋಗರಾಜ್ ಭಟ್ ಸಿನಿಮಾಸ್ ಹಾಗೂ ಪರ್ಲ್ ಸಿನಿ ಲಾಂಛನದಲ್ಲಿ ಸಂತೋಷ್ ಕುಮಾರ್ ಹಾಗೂ ವಿದ್ಯಾ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಾಮ್ ನಾರಾಯಣ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
‘ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಸನ್ನಿವೇಶಗಳ ರಾಮನಗರ ಸಮೀಪದಲ್ಲಿ ನಡೆದಿದೆ. ವಿಭಿನ್ನ ಕಥಾ ಹಂದರದ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ’ ಎಂದು ನಿರ್ದೇಶಕ ರಾಮನಾರಾಯಣ ಹೇಳಿದ್ದಾರೆ.
ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ನಾಯಕ ಹಾಗೂ ನಾಯಕಿ ಆಗಿ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಹರೀಶ್ ರಾಜ್, ತಬಲಾ ನಾಣಿ, ಕರಿಸುಬ್ಬು ಮುಂತಾದವರು ಚಿತ್ರದಲ್ಲಿದ್ದಾರೆ. ಸೋನಾಲ್ ಮೊಂತೆರೋ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Be the first to comment