‘ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡುವಾಗ ನಿರ್ಮಾಪಕರು ಮತ್ತು ಚಿತ್ರತಂಡದವರು ಆರಂಭದಲ್ಲಿ ಆತ್ಮೀಯವಾಗಿ ಮಾತನಾಡುತ್ತಾರೆ. ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪರಿಸ್ಥಿತಿ ಬದಲಾಗುತ್ತದೆ’ ಎಂದು ಸ್ಯಾಂಡಲ್ ವುಡ್ ಕುರಿತು ನಟಿ ತಪಸ್ವಿನಿ ಪೂಣಚ್ಚ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ತಪಸ್ವಿನಿ ಪೂಣಚ್ಚ ಸ್ಯಾಂಡಲ್ವುಡ್ ನ ಕರಾಳ ಮುಖ ಬಿಚ್ಚಿಟ್ಟಿದ್ದಾರೆ. ‘ಪ್ರಾಜೆಕ್ಟ್ಗೆ ಸಹಿ ಹಾಕುವ ಮೊದಲು ನಿರ್ಮಾಪಕರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ನಿಮ್ಮ ಅಸಿಸ್ಟೆಂಟ್ ಮತ್ತು ಪೋಷಕರನ್ನೂ ಕರೆದುಕೊಂಡು ಬರಬಹುದು ಎನ್ನುತ್ತಾರೆ. ಈ ಪ್ರಾಜೆಕ್ಟ್ ನಿಮ್ಮದೇ ಎಂಬಂತೆ ಮಾತನಾಡುತ್ತಾರೆ. ಆದರೆ ಒಪ್ಪಂದದ ಪತ್ರಕ್ಕೆ ಸಹಿ ಹಾಕಿದ ಕ್ಷಣದಿಂದ ಎಲ್ಲವೂ ಬದಲಾಗುತ್ತದೆ. ಒಮ್ಮೆ ಸಹಿ ಹಾಕಿದರೆ ಅವರ ಎಲ್ಲ ಷರತ್ತುಗಳಿಗೂ ಒಪ್ಪಿಕೊಂಡಂತೆ. ಆಮೇಲೆ ನಿಮ್ಮ ಕೈಯಲ್ಲಿ ಏನೂ ಇರುವುದಿಲ್ಲ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಚಿತ್ರರಂಗದ ಹಿರಿಯರು ಮತ್ತು ನಿರ್ಮಾಪಕರು ಹೊಸ ಕಲಾವಿದರ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಮೊದಲು ಸ್ಟಾರ್ ಆಗಿ ಮಿಂಚಿ, 35 ಅಥವಾ 40 ವರ್ಷ ವಯಸ್ಸಾಗುವವರೆಗೆ ಹಣ ಸಂಪಾದಿಸಿ, ಖ್ಯಾತಿ ಗಳಿಸಿ. ಆಮೇಲೆ ಜೀವನದಲ್ಲಿ ನೆಲೆ ಕಂಡುಕೊಳ್ಳಿ ಎಂದು ಹೇಳುತ್ತಾರೆ. ಹಣ ಮತ್ತು ಖ್ಯಾತಿ ಇದ್ದರೆ ಮಾತ್ರ ಜಗತ್ತು ಗೌರವ ನೀಡುತ್ತದೆ ಎಂಬ ನಂಬಿಕೆಯನ್ನು ನಮ್ಮಲ್ಲಿ ಮೂಡಿಸಲು ಪ್ರಯತ್ನಿಸುತ್ತಾರೆ’ ಎಂದು ಹೇಳಿದ್ದಾರೆ.
‘ವ್ಯಕ್ತಿತ್ವ, ಸ್ವಾಭಿಮಾನ ಮತ್ತು ಪರಸ್ಪರ ಗೌರವಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ನಿಮ್ಮ ಖ್ಯಾತಿ ಮತ್ತು ಸ್ಟಾರ್ ಸ್ಥಾನಮಾನವನ್ನು ನೀವೇ ಇಟ್ಟುಕೊಳ್ಳಿ. ನನಗೆ ಅವು ಯಾವುದೂ ಬೇಡ. ಅಂತಹ ಗೌರವವೂ ನನಗೆ ಅಗತ್ಯವಿಲ್ಲ’ಎಂದು ನೇರವಾಗಿ ಉತ್ತರಿಸಿದ್ದಾಗಿ ತಿಳಿಸಿದ್ದಾರೆ.
ಕೊಡಗು ಮೂಲದ ತಪಸ್ವಿನಿ ಪೂಣಚ್ಚ 2022ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇದೀಗ ‘ಪ್ರೇಮದ ಊರಲಿ’ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.
—-





Be the first to comment