ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ‘ಜನ ನಾಯಗನ್’ ಚಿತ್ರದ ಬಿಡುಗಡೆಯನ್ನು ತಡೆದಿದ್ದು ಯಾರು ಎನ್ನುವುದನ್ನು ಚಿತ್ರದ ನಿರ್ಮಾಪಕ ವೆಂಕಟೇಶ್ ಕೆ ನಾರಾಯಣ್ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘2025ರ ಡಿಸೆಂಬರ್ನಲ್ಲಿ ನಾವು ಸಿಬಿಎಫ್ಸಿಗೆ ಸಿನಿಮಾವನ್ನು ಸಲ್ಲಿಕೆ ಮಾಡಿದ್ದೆವು. ಸಿಬಿಎಫ್ಸಿ ಸಮಿತಿ ಸಿನಿಮಾವನ್ನು ವೀಕ್ಷಿಸಿ ಯು/ಎ ಪ್ರಮಾಣ ಪತ್ರ ನೀಡಿತ್ತು. ಆದರೆ ಬಳಿಕ ವ್ಯಕ್ತಿಯೊಬ್ಬರ ದೂರಿನ ಆಧಾರದ ಮೇಲೆ ಸಿನಿಮಾವನ್ನು ರಿವಿಷನ್ ಕಮಿಟಿಗೆ ಕಳಿಸಲು ಮುಂದಾದರು. ಖಾಸಗಿ ವ್ಯಕ್ತಿಗಳ ದೂರುಗಳನ್ನು ಸಿಬಿಎಫ್ಸಿ ಪರಿಗಣಿಸುವಂತಿಲ್ಲ. ಸಿನಿಮಾ ಬಿಡುಗಡೆಗೆ ಮುಂಚೆ ಸಲ್ಲಿಕೆ ಆದ ದೂರುಗಳನ್ನು ಮಾನ್ಯ ಮಾಡುವಂತಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆವು’ ಎಂದಿದ್ದಾರೆ.
‘ನ್ಯಾಯಾಲಯಕ್ಕೆ ಹೋದ ಬಳಿಕ ನಮಗೆಸಿನಿಮಾದ ವಿರುದ್ಧ ದೂರು ನೀಡಿರುವುದು ಸಿಬಿಎಫ್ಸಿಯ ಸದಸ್ಯ ಎಂದು ಗೊತ್ತಾಯಿತು. ಮೊದಲಿಗೆ ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ನೀಡಿದ ತಂಡದಲ್ಲಿ ಇದ್ದ ವ್ಯಕ್ತಿ ಆ ಬಳಿಕ ಸಿನಿಮಾದ ವಿರುದ್ಧ ದೂರು ಸಲ್ಲಿಸಿದ್ದ. ನಾವು ರಿವಿಷನ್ ಕಮಿಟಿಗೆ ಸಿನಿಮಾವನ್ನು ಕಳಿಸಲು ಒಪ್ಪಿದೆವು. ಆದರೆ ಸಿನಿಮಾ ಅಲ್ಲಿಯೇ ಸಿಲುಕಿಕೊಂಡಿದೆ. ಎಲ್ಲ ಫಾರ್ಮಾಲಿಟಿಗಳು ಪೂರ್ಣಗೊಂಡ ಬಳಿಕ ನಾವು ಸಿನಿಮಾ ಬಿಡುಗಡೆ ಮಾಡಬಹುದಾಗಿದೆ’ ಎಂದಿದ್ದಾರೆ ನಿರ್ಮಾಪಕರು.
‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶಿಸಿದ್ದಾರೆ. ಪೂಜಾ ಹೆಗ್ಡೆ, ಮಲಯಾಳಂನ ಮಮಿತಾ ಬಿಜು ನಟಿಸಿದ್ದಾರೆ. ಸಿನಿಮಾ ಕಳೆದ ಜನವರಿ 9ರಂದು ಬಿಡುಗಡೆ ಆಗಬೇಕಿತ್ತು, ಆದರೆ ಬಿಡುಗಡೆ ತಡವಾಗುತ್ತಲೇ ಬಂದಿದೆ.
_





Be the first to comment