ವರಲಕ್ಷ್ಮೀ-ರಾಗಿಣಿ

’ಪೊಲೀಸ್ ಕಂಪ್ಲೈಂಟ್’ನಲ್ಲಿ ವರಲಕ್ಷ್ಮೀ-ರಾಗಿಣಿ ಆ್ಯಕ್ಷನ್ ಕಹಾನಿ

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಇಂಥ ವಿರಳ ಸಿನಿಮಾಗಳ ಸಾಲಿಗೆ ಈಗೊಂದು ಹೊಸ ಸಿನಿಮಾ ಸೇರ್ಪಡೆಯಾಗುತ್ತಿದೆ. ಆ ಸಿನಿಮಾದ ಹೆಸರೇ ‘ಪೊಲೀಸ್ ಕಂಪ್ಲೈಂಟ್’. ಇತ್ತೀಚೆಗಷ್ಟೇ ‘ಮ್ಯಾಕ್ಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ವರಲಕ್ಷ್ಮೀ ಶರತಕುಮಾರ್ ಹಾಗೂ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಪೊಲೀಸ್ ಕಂಪ್ಲೈಂಟ್’ ಚಿತ್ರದಲ್ಲಿ ನವೀನ್ ಚಂದ್ರ, ಕೃಷ್ಣ ಸಾಯಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಹೀಗೆ ದೊಡ್ಡ ಕಲಾವಿದರ ತಾರಾಗಣವೇ ಚಿತ್ರದಲ್ಲಿದೆ.

ಕನ್ನಡದಲ್ಲಿ ಈ ಹಿಂದೆ ಪೂಜಾಗಾಂಧಿ ಅಭಿನಯದ ‘ಅನು’, ‘ದಂಡು’, ‘ಆಪ್ತ’, ‘ಆದಿ ಪರ್ವ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಸಂಜೀವ ಮೆಗೋಟಿ ‘ಪೊಲೀಸ್ ಕಂಪ್ಲೈಂಟ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಎಂ.ಎಸ್.ಕೆ ಪ್ರಮೀದಾಶ್ರೀ ಫಿಲಂಸ್’ ಬ್ಯಾನರಿನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಟೀಸರ್, ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಸಿನಿಪ್ರಿಯರು ಮತ್ತು ಚಿತ್ರರಂಗದ ಮಂದಿಯಿಂದ ನಿರೀಕ್ಷೆಯ ಮಾತುಗಳು ವ್ಯಕ್ತವಾಗುತ್ತಿದೆ.

ಇನ್ನು ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಸಂಜೀವ ಮೆಗೋಟಿ, ‘ಸುಮಾರು ಹತ್ತು ವರ್ಷದ ನಂತರ ಕನ್ನಡದಲ್ಲಿ ‘ಪೊಲೀಸ್ ಕಂಪ್ಲೈಂಟ್’ ಚಿತ್ರವನ್ನು ನಿರ್ದೇಶಿಸಿ, ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆ್ಯಕ್ಷನ್ ಕಂ ಹಾರರ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ನಾವು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ಈ ಸಿನಿಮಾದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ’ ಎಂದರು.

‘ಪೊಲೀಸ್ ಕಂಪ್ಲೈಂಟ್’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ‘ನನ್ನ ಸಿನಿಮಾ ಕೆರಿಯರ್ ನಲ್ಲಿ ಇದೊಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಶನ್ಸ್ ಕೂಡ ಸಿನಿಮಾದಲ್ಲಿದೆ. ಎಲ್ಲಾ ಥರದ ಆಡಿಯನ್ಸ್ ಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪೊಲೀಸ್ ಕಂಪ್ಲೈಂಟ್’ ಮತ್ತೊಬ್ಬ ನಾಯಕಿ ವರಲಕ್ಷ್ಮೀ ಶರತ್ ಕುಮಾರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿರುವ ವರಲಕ್ಷ್ಮೀ ಶರತ್ ಕುಮಾರ್, ‘ಇದು ಇಂದಿನ ಜನರೇಶನ್ ಆಡಿಯನ್ಸ್ ಗೆ ಬಹುಬೇಗ ಕನೆಕ್ಟ್ ಆಗುವ ಸಿನಿಮಾ. ಇದರಲ್ಲಿ ಮನಮುಟ್ಟುವ ಕಥೆಯ ಜೊತೆಗೆ, ಸಮಾಜಕ್ಕೊಂದು ಸಂದೇಶವಿದೆ. ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಹೀಗೆ ಎಲ್ಲಾ ಥರದ ಎಂಟರ್ಟೈನ್ಮೆಂಟ್ ಎಲಿಮೆಂಟ್ಸ್ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾದಲ್ಲಿದೆ. ಖಂಡಿತಾ, ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದಿದ್ದಾರೆ.

‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟರಲ್ಲಿ ಒಬ್ಬರಾದ ಕೃಷ್ಣಸಾಯಿ, ‘ಇಲ್ಲಿಯವರೆಗೆ ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ನಾಯಕ ನಟನಾಗಿ ಇದು ನನಗೆ ಮೊದಲ ಸಿನಿಮಾ. ಸಿನಿಮಾಕ ಕಥೆ ಮತ್ತು ಪಾತ್ರ ತುಂಬಾ ಚೆನ್ನಾಗಿದೆ’ ಎಂದಿದ್ದಾರೆ. ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಮೊದಲ ಗೀತೆಗೆ ಆರೋಹಣ ಸುಧೀಂದ್ರ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣವಿದೆ. ಅಂದಹಾಗೆ, ‘ಪೊಲೀಸ್ ಕಂಪ್ಲೈಂಟ್’ ಚಿತ್ರ ಇದೇ ಜೂ. 12ಕ್ಕೆ ಕರ್ನಾಟಕ ರಾಜ್ಯಾದ್ಯಂತ ಸುಮಾರು 70ಕ್ಕೂ ಹೆಚ್ಚಿನ ಪರದೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!